ಶನಿವಾರ, ಏಪ್ರಿಲ್ 4, 2009

ಚೇತನಾ ತೀರ್ಥಹಳ್ಳಿ ಕಳುಹಿಸಿದ ತತ್ರಾನಿಯ ನೀರು ಕುಡಿಯ ಬನ್ನಿ ಹಕ್ಕಿಗಳೇ..


ಬೇಸಿಗೆ ದಾಳಿಯಿಟ್ಟಿದೆ. ಗಂಟಲೊಣಗಿ ದರಗಾಗುವ ಕಾಲವಿದು. ದಾಹ... ದಾಹ... ದಾಹ...ನಮಗೆ ಮಾತ್ರವಲ್ಲ...ಮನುಷ್ಯರಿಗಾದರೂ ಬಾಯಿಬಿಟ್ಟು ನೀರು ಕೇಳುವ ಅವಕಾಶವುಂಟು. (ಕೆಲವೆಡೆ ನೀರಿನ ವಿಷಯವಾಗಿ ವರ್ಗ ಸಂಘರ್ಷಗಳು ನಡೆದು ಮೇಲ್ಜಾತಿ ಅನಿಸಿಕೊಂಡವರು ಕೆಳಜಾತಿ ಎಂದು ಕರೆಯಲ್ಪಟ್ಟವರನ್ನು ತುಳಿದ, ಹೂತ, ಸುಟ್ಟ ಕೆಟ್ಟ ಘಟನೆಗಳೂ ಇವೆ ಬಿಡಿ... ಅದು ವಿಷಯಾಂತರ..)ಹಾ. ಮನುಷ್ಯರಿಗೆ ಎಲ್ಲಿಂದಲಾದರೂ ಹನಿ ನೀರು ಹೊಂಚಿಸಿಕೊಂಡು ಜೀವ ಉಳಿಸಿಕೊಳ್ಳುವ ಅವಕಾಶವುಂಟು... (ಮತ್ತೆ ಮನಸಿಗೆ ಹಿಂಸೆಯಾಗ್ತಿದೆ. ಸೋಮಾಲಿಯಾದ ಫೋಟೋಗಳನ್ನ ನೀವೂ ಮೇಲ್ ಗಳಲ್ಲಿ, ನೆಟ್ಟಿನಲ್ಲಿ ನೋಡಿ ಕಣ್ಣೊದ್ದೆ ಮಾಡ್ಕೊಂಡಿರಬಹುದು)
ಸರಿ. ಬಾಯ್ಬಿಟ್ಟು ಕೇಳಿ, ಹೇಗಾದರೂ ನೀರು ಹೊಂಚಿಕೊಂಡು ಕುಡಿಯುವ ಅವಕಾಶ ಮನುಷ್ಯರಿಗಿದೆ ಅಂತಲೇ ಇಟ್ಟುಕೊಳ್ಳೋಣ ಸಧ್ಯಕ್ಕೆ. ಆದರೆ ಪ್ರಾಣಿ ಪಕ್ಷಿಗಳಿಗೆ?ಲೆಕ್ಕಾಚಾರದ ಪ್ರಕಾರ ಸಾವಿರಕ್ಕೂ ಮೀರಿ ಪಕ್ಷಿಗಳು ದಾಹದಿಂದ ಬೇಸಿಗೆಯಲ್ಲಿ ಸಾವಪ್ಪುತ್ತವೆಯಂತೆ. ಮೊದಲಾದರೆ ಕಂಡಲ್ಲಿ ನೀರ ಹೊಂಡಗಳು ಇರುತ್ತಿದ್ದವು. ನಾವೀಗ ಅವನ್ನು ನಮಗೂ ಉಳಿಸಿಕೊಂಡಿಲ್ಲ, ಇತರ ಜೀವಿಗಳಿಗೂ ಉಳಿಸಿಕೊಟ್ಟಿಲ್ಲ.ಪಾಪಕ್ಕೆ ಪ್ರಾಯಶ್ಚಿತ್ತ ಬೇಡವೇ?
ಪ್ಲೀಸ್, ನಿಮ್ಮ ಮನೆ ಬಾಲ್ಕನಿಯಲ್ಲೋ, ತಾರಸಿಯ ಮೇಲೂ, ಕಾಂಪೌಂಡಿನ ತುದಿಯಲ್ಲೋ ಅಗಲ ಬಾಯಿಯ ಮಡಿಕೆ ತುಂಬ ನೀರು ತುಂಬಿಡಿ. ಸಾಧ್ಯವಿದ್ದಷ್ಟೂ ಮನುಷ್ಯರ ಗದ್ದಲವಿರದ ಕಡೆ ಇಡಲು ಯತ್ನಿಸಿ. ಮನುಷ್ಯನಿಗೆ ಹೆದರುವ ಹಕ್ಕಿಗಳು ನೀರು ಕಂಡೂ ಕುಡಿಯದಂತಾಗೋದು ಬೇಡ.
ಮನುಕುಲ, ಸಹಜೀವಿಗಳಿಗೆ ಭರಿಸಲಾಗದ ಅನ್ಯಾಯವೆಸಗಿದೆ. ನಮ್ಮ ಪಾಪ ಸಾಗರಕ್ಕೆ ದಿನಕ್ಕೊಂದು ಮಡಿಕೆ ನೀರು ಹನಿಲೆಕ್ಕದ ಪ್ರಾಯಶ್ಚಿತ್ತವಾಗಬಲ್ಲದು.ಅದಕ್ಕೇ,ಒಂದೇ ಒಂದು ಮಡಿಕೆ ನೀರು-ಹಕ್ಕಿಗಳಿಗಾಗಿ ತುಂಬಿಡೋಣ. ಆಗದೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ