ಬುಧವಾರ, ಏಪ್ರಿಲ್ 1, 2009

ಸನಾತನವಾದಿ ಸಂಸದ ಹೆಗಡೆಗೆ ಸವಾಲು

ಬಿಜೆಪಿ ಮುಖಂಡ ಹಾಗೂ ಸಂಸದ ಅನಂತಕುಮಾರ ಹೆಗಡೆ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಸಮಾಜ ಮಂದಿರದಲ್ಲಿ ಭಾನುವಾರ (29.3.2009) ನಡೆದ ಕಾರ್ಯಕರ್ತರ ಸಭೆಯಲ್ಲಿ 'ನನಗೆ ಹಿಂದೂಗಳ ಮತವೇ ಸಾಕು' ಎಂದು ಘೋಷಿಸುವ ಮೂಲಕ ಬಿಜೆಪಿಯ ಹಿಡನ್ ಅಜೆಂಡಾವನ್ನು ಬಹಿರಂಗಗೊಳಿಸಿದ್ದಾರೆ. ಈ ಹೇಳಿಕೆಗೆ ತಾವು ಬದ್ಧ ಅಷ್ಟೆ ಅಲ್ಲ; ಚುನಾವಣಾ ಆಯೋಗ ಬೇಕಿದ್ದರೆ ತಮ್ಮ ವಿರುದ್ಧ ಪ್ರಕರಣ ದಾಖಲಿಸಲಿ ಎಂದೂ ಸವಾಲು ಹಾಕಿರುವುದು ಬಹುಸಂಖ್ಯಾತ ಮನುಷ್ಯತ್ವವಾದಿಗಳು ತಲೆತಗ್ಗಿಸುವಂತಾಗಿದೆ. ಇಂಡಿಯಾದ ಸಂವಿಧಾನ ಮತ್ತು ಪ್ರಜಾತಂತ್ರ ವ್ಯವಸ್ಥೆಗೇ ಹೆಗಡೆ ಮಾತು ಅಪಚಾರ. ಬಹು ಧಮರ್ೀಯರು 'ಭಾಯಿ-ಭಾಯಿ' ಎಂದು ಭಾವೈಕ್ಯತೆಯಿಂದ ಬದುಕುವ ದೇಶದಲ್ಲಿ ಹೆಗಡೆ ಸೇರಿದಂತೆ ಅನೇಕ ಮನುಷ್ಯ ವಿರೋಧಿ ಪಕ್ಷ ಹಾಗೂ ಸಂಘಟನೆಗಳ ಮುಖಂಡರು ಕಿಚ್ಚು ಹೊತ್ತಿಸಿ ಶಾಂತಿ ಭಂಗಕ್ಕೆ ಕಾರಣವಾಗಿರುವುದು ಸ್ಪಷ್ಟ. ಸೌಹಾರ್ದತೆಯ ತಾಣವಾದ ಇಂಡಿಯಾದಲ್ಲಿ ಹೆಗಡೆಯಂತವರು ವಾಸಿಸುವ ಹಕ್ಕನ್ನೇ ಪ್ರಶ್ನಿಸಬೇಕಾಗುತ್ತದೆ. ಅದೇ ಸಭೆಯಲ್ಲಿ ಮುಂದುವರೆದು ಮಾತನಾಡಿ, 'ಅಲ್ಪಸಂಖ್ಯಾತರ ಮತಕ್ಕಾಗಿ ಕೆಲವರು ಅವರನ್ನು ತುಷ್ಟೀಕರಣ ಮಾಡುವುದಾದರೆ, ನಾನು ಬಹುಸಂಖ್ಯಾತರಿಗಾಗಿ ರಾಜಕಾರಣ ಮಾಡುತ್ತೇನೆ. ಶ್ರೀರಾಮನಿಗೋಸ್ಕರ, ಶ್ರೀಕೃಷ್ಣನಿಗೋಸ್ಕರ ರಾಜಕಾರಣ ಮಾಡುತ್ತೇನೆ' ಎಂದಿರುವುದೂ ಅವರ ಕಹಿ ಮನಸ್ಸು ಮತ್ತು ಭಾವನೆಗಳಿಗೆ ಸಾಕ್ಷಿ. ನಿಜ, ಹೆಗಡೆಯಂತವರು ರಾಜಕಾರಣ ಮಾಡುವುದು, ಅವರೇ ಒಪ್ಪಿಕೊಂಡಂತೆ, ಶ್ರೀರಾಮನಿಗೋಸ್ಕರ ಮತ್ತು ಶ್ರೀ ಕೃಷ್ಣನಿಗೋಸ್ಕರ. ಅಂತವರಿಗೆ ಕಲ್ಲು, ಕಟ್ಟಿಗೆಗಳಲ್ಲಿ ಕಾಣುವ ಶ್ರೀರಾಮ, ಶ್ರೀಕೃಷ್ಣರೇ ಹೆಚ್ಚು. ಹಾದಿ-ಬೀದಿ, ಊರು-ಕೇರಿಗಳಲ್ಲಿ ತೀರಾ ಸಾಮಾನ್ಯವಾಗಿ, ದಯನೀಯ ಸ್ಥಿತಿಯಲ್ಲಿ ಬದುಕುವ ರಾಮನಾಗಲಿ ಕೃಷ್ಣನಾಗಲಿ ಕಾಣುವುದಿಲ್ಲ. ಹರಕು-ಮುರುಕು ಗುಡಿಸಲುಗಳಲ್ಲಿ ವಾಸಿಸುವ ಹಾಗೆಯೇ ತಮ್ಮಂತೆ ಉಸಿರಾಡುವ ಕೋಟ್ಯಾನುಕೋಟಿ ರಾಮ, ಕೃಷ್ಣರಿಗೆ ಒಂದು ಸೂರು ಮಾಡಿಕೊಡಬೇಕೆಂಬ ಖಬರು ಇರುವುದಿಲ್ಲ. ವೈರುಧ್ಯದ ಹಾಗೂ ಕಾಲ್ಪನಿಕ ಪಾತ್ರಗಳೆನಿಸಿಕೊಂಡ ಶ್ರೀರಾಮಚಂದ್ರ ಮತ್ತು ಶ್ರೀಕೃಷ್ಣ ಪರಮಾತ್ಮರ ಪರವಾಗಿ ತಾವು ರಾಜಕಾರಣ ಮಾಡುವುದು. ಅವರಿಗಾಗಿ ಕೋಟ್ಯಂತರ ರೂಪಾಯಿ ಖಚರ್ುಮಾಡಿ ಗುಡಿ, ಗುಂಡಾರ, ಮಂದಿರ ನಿಮರ್ಿಸುತ್ತೇವೆ. ಕೇವಲ ಸಿಕ್ಕ ಜಾಗೆಯಲ್ಲೆ ತಮ್ಮ ಆರಾಧ್ಯದೈವಗಳಿಗೆ ಮಂದಿರ ಕಟ್ಟುವುದಿಲ್ಲ. ಕೆಡುವುದೂ ತಮ್ಮ ಹುಟ್ಟುಗುಣ ಎಂಬಂತೆ ಮಸೀದಿ, ಚಚರ್ುಗಳನ್ನೂ ಕೆಡವಿ ಸೌಹಾರ್ದತೆಯ ಬಾಳಿಗೆ ಹುಳಿ ಹಿಂಡಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಜಾಯಮಾನ ತಮ್ಮದು ಎಂಬ ಅವರ ಅಭಿಮಾನ ತೀರಾ ನಾಚಿಕೆಗೇಡಿತನದ್ದು. ಅವರು ರಾಜಕಾರಣಿಯಾಗಿರುವುದು ಯಾವ ದೇಶದಲ್ಲಿ. ರಾಜಕಾರಣಿಯಾಗಲಿಕ್ಕೆ, ಸಂಸದರಾಗಿ ಆಯ್ಕೆಯಾಗುವುದಕ್ಕೆ ಯಾವ ದೇಶದ ಸಂವಿಧಾನ, ಪ್ರಜಾತಂತ್ರ ವ್ಯವಸ್ಥೆ, ಕಾಯ್ದೆ, ಕಾನೂನುಗಳು ಒಪ್ಪಿಗೆ ನೀಡಿವೆ ಎಂಬುದನ್ನು ಮನಗಾಣಬೇಕು. ಕೆಲವರು ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸ ಮಾಡುತ್ತಿದ್ದು, ತಾವು ಬಹುಸಂಖ್ಯಾತರನ್ನು ಓಲೈಸಿದರೆ ತಪ್ಪೇನು ಎಂದು ಹೆಗಡೆ ಮೂರೂ ಬಿಟ್ಟು ಕೇಳಿರುವುದು ಹಾಸ್ಯಾಸ್ಪದ. ಯಾರು ಈ ದೇಶದಲ್ಲಿ ಅಲ್ಪಸಂಖ್ಯಾತರು? ದೇಶದ ಪ್ರತಿ ನಾಗರಿಕನೂ ಈ ದೇಶದ ಹೆಮ್ಮೆಯ ಪುತ್ರ / ಪುತ್ರಿ. ದೇಶದ ಸಂವಿಧಾನ, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದಿರುವಾಗ ಎಲ್ಲಿಯದು ಈ ಭಿನ್ನ ಭೇದ ಮಾತು. ಕನರ್ಾಟಕದಲ್ಲಿ ಗುಜರಾತ ಮಾದರಿ ಅಭಿವೃದ್ಧಿ ಸಾಧಿಸುವುದಾಗಿ ಹೇಳಿಕೊಂಡೇ ಅಧಿಕಾರಗ್ರಹಣಮಾಡಿದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸಕರ್ಾರ ಎಲ್ಲಾ ಅನಾಚಾರ, ಅಪಚಾರದ ಕೆಲಸಗಳನ್ನು ಶಕ್ತಿಮೀರಿ ಮಾಡುವಲ್ಲಿ ಯತ್ನಿಸುತ್ತಿರುವುದು ಎಲ್ಲರ ಅನುಭವಕ್ಕೆ ಬಂದಿದೆ. ಜಾತಿ, ಧರ್ಮ, ಭಾಷೆ, ಉಡುಗೆ, ತೊಡುಗೆ, ಬಟ್ಟೆ, ಬರೆ, ಭೌತಿಕ ಆಕಾರ, ಬಿಟ್ಟ ಕೂದಲುಗಳನ್ನೇ ಭಿನ್ನ ಭೇದಕ್ಕೆ ಮಾನದಂಡಗಳನ್ನಾಗಿ ಬಳಸುತ್ತಿರುವುದು ಯಾವುದೇ ನಾಗರಿಕ ಸಮಾಜಕ್ಕೆ ಒಪ್ಪುವುದಲ್ಲ. ಕೇವಲ ಅಧಿಕಾರ, ಪ್ರಭಾವ, ಗೂಂಡಾಗಿರಿ ಪ್ರಯೋಗಿಸಿ ಜನರಲ್ಲಿ ಭಯ ಭೀತಿ ಹುಟ್ಟಿಸಿ ತಾತ್ಕಾಲಿಕ ಯಶಸ್ಸು ಗಳಿಸಿದರೂ ಅದಕ್ಕೆ ಮನುಷ್ಯತ್ವದಡಿ ಬೆಲೆಯಿರದು. ಹೆಗಡೆ ಮತ್ತವರ ಬಳಗ ಬಾಯಿಬಿಟ್ಟರೆ ಸಾಕು ತಾವು ಹಿಂದೂಪರವಾದಿಗಳು ಎಂದು ಬಡಬಡಿಸುತ್ತಿರುವುದರ ಬಗ್ಗೆ ಕೆಲವು ಅಂತರಾಳದ ಮಾತುಗಳು. ಹಿಂದೂ ಎಂದರೆ ಏನು? ಹಿಂದೂ ಎಂಬುದು ಒಂದು ಧರ್ಮವೇ? ಹಿಂದೂ ಎಂಬುದು ಒಂದು ಜನಾಂಗವೇ ಇಲ್ಲಾ ಒಂದು ಜಾತಿಗೇ ಸೀಮಿತವಾದುದೇ? ಎಲ್ಲವೂ ಗೊಂದಲದ ಸಂಗತಿಗಳೇ. ಇದಕ್ಕೆಲ್ಲಾ ಹೆಗಡೆಯಂತವರು ತಾತ, ಮುತ್ತಾತನ ಕಾಲದಲ್ಲೇ ತಮಗೆ ಬೇಕಾದಂತೆ ಬರೆದುಕೊಂಡ ಸನಾತನ ಹೊತ್ತಿಗೆಗಳನ್ನೊ ಇಲ್ಲಾ ತಾಳೆಗರಿ ಓಲೆಗಳನ್ನೊ ಇಲ್ಲಾ ಮತ್ತಿನ್ನಿನೋ ತೋರಿಸಬಹುದು. ಇವತ್ತು ಬಿಜೆಪಿ ಮತ್ತು ಇತರೆ ಕೆಲವು ಪಕ್ಷಗಳು ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ರೀತಿಯಲ್ಲಿ ಧಮರ್ಾಂಧತೆ, ಮತಾಂಧತೆಗೆ ಬೆಲೆ ನೀಡುತ್ತಿರುವುದೂ ಮುಂದೊಂದು ದಿನ ಶಾಸನವಾಗಿಯೊ ಇಲ್ಲಾ ಒಪ್ಪಿತ ಸಿದ್ಧಾಂತಗಳೆಂದೊ ತಿಳಿಯಬೇಕಾದೀತು! ಒಂದು ಮಾತನ್ನು ತೀರಾ ಸ್ಪಷ್ಟ ಹಾಗೂ ಅರ್ಥವಾಗುವ ರೀತಿಯಲ್ಲಿ ಹೇಳಬೇಕೆಂದರೆ, ಈ ದೇಶದ ಯಾವ ದಲಿತರು, ಪರಿಶಿಷ್ಟ ಜಾತಿ, ಜನಾಂಗಗಳ ಜನರು, ಹಿಂದುಳಿದವರು, ಬಡವರು, ಅಸಹಾಯಕರು, ದುಡಿಯುವ ವರ್ಗ, ರೈತರು, ಕಾಮರ್ಿಕರು, ಎಲ್ಲಾ ಮಹಿಳೆಯರು, ಲಿಂಗಾಯತರು, ಒಕ್ಕಲಿಗರು, ಕುರುಬರು, ಬೇಡರು, ದೀನರು ಒಟ್ಟಾರೆ ತೀರಾ ಈ ದೇಶದ ತೊಂಬತ್ತೈದರಷ್ಟು ಜನ ಮಾನಸಿಕವಾಗಿ ಹಿಂದೂಗಳಲ್ಲ ಎಂದೇ ತಿಳಿದಿದ್ದಾರೆ. ಭೌತಿಕವಾಗಿಯೂ ಹಿಂದೂಧರ್ಮದ ಕಟ್ಟುಪಾಡುಗಳು, ಪೂಜೆ, ಪುನಸ್ಕಾರಗಳು, ಕಾಣಿಕೆ, ಬಲಿ, ಹರಕೆ, ನೀತಿಗೆಟ್ಟ ನಿಯಮಗಳು, ಅಸಮಾನತೆಯ ತತ್ವಗಳು, ಮನುಷ್ಯರಲ್ಲೆ ಪುರುಷರು ಮತ್ತು ಮಹಿಳೆಯರ ಮಧ್ಯೆ ಕಂದಕ ಸೃಷ್ಟಿಸುವ ಆಚರಣೆಗಳು, ಒಟ್ಟಾರೆ ಕೇವಲ ಒಂದೇ ಒಂದು ಜಾತಿಯ ಜನ ಹಿಂದೂ ಧರ್ಮವನ್ನು ಪಾಲಿಸುತ್ತಿರುವುದು. ಅವರು ಮಾತ್ರ ಹಿಂದೂಗಳು. ಅವರಲ್ಲೂ ಕೆಲವರು ತಾವು ಹಿಂದೂಗಳಲ್ಲ, ಹಾಗೆ ಕರೆಯಿಸಿಕೊಳ್ಳುವುದರಿಂದ ಈ ದೇಶದ ಸಾರ್ವಭೌಮತೆಗೆ ಧಕ್ಕೆ ತರಬೇಕಾಗುತ್ತದೆ ಎಂದೇ ಭಾವಿಸಿರುವ ಸೂಕ್ಷ್ಮ ಮನಸ್ಸಿನವರೂ ಇದ್ದಾರೆ. ಆದರೆ ಹೆಗಡೆಯಂತವರಿಗೆ ಹಿಂದೂ ಮತಗಳು ಬೇಕು. ಅಲ್ಪಸಂಖ್ಯಾತರು ಈ ದೇಶವಾಸಿಗಳಲ್ಲ ಅವರ ಪ್ರಕಾರ. ಈ ಸೋ ಕಾಲ್ಡ್ ಹಿಂದೂಗಳು ಈ ದೇಶದವರಲ್ಲವಲ್ಲ. ಹಾಗೆ ಅವರೇ ವಿವಿಧ ಧರ್ಮಶಾಸ್ತ್ರಗಳು, ಇತಿಹಾಸದಲ್ಲಿ ಬರೆದಿರುವುದನ್ನು ಓದಿ ನಾನು ತಿಳಿದುಕೊಂಡಿದ್ದು. ಹೆಗಡೆಯಂತಾ ಹಿಂದೂಗಳು ಆರ್ಯರೆಂದು ಅವರು ಮಧ್ಯ ಏಷ್ಯಾದಿಂದ ಇಂಡಿಯಾಕ್ಕೆ ವಲಸೆ ಬಂದವರೆಂದು ಇತಿಹಾಸದ ದಾಖಲೆಗಳು ತಿಳಿಸುತ್ತವೆ. ಅನ್ಯ ದೇಶದಿಂದ ಬಂದ ಮುಸ್ಲಿಂರು, ಕ್ರಿಶ್ಚಿಯನ್ನರು ಆಕ್ರಮಣಶೀಲ ನೀತಿ ಅನುಸರಿಸಿದರು ಎಂದು ಇಂತಹ ಹಿಂದೂವಾದಿಗಳು ಮೇಲಿಂದ ಬಡಬಡಿಸುತ್ತಾರೆ. ಇಂಡಿಯಾಕ್ಕೆ ವಲಸೆ ಬಂದ ಆರ್ಯನ್ನರು ಅಂದರೆ ಇಂದಿನ 4-5ರಷ್ಟು ಇರುವ ಸೋ ಕಾಲ್ಡ್ ಹಿಂದೂಗಳು ಇಂಡಿಯಾದ ಮೂಲನಿವಾಸಿಗಳಾದ ದ್ರಾವಿಡರ ಮೇಲೆ ಆರಂಭದಿಂದ ಇಲ್ಲಿಯವರೆಗೆ ಅನುಸರಿಸುತ್ತಿರುವುದು ಆಕ್ರಮಣಶೀಲ ನೀತಿಯಲ್ಲದೆ ಮತ್ತೇನು? ಆಯ್ತು ಹೆಗಡೆಯವರೆ, ನಿಮ್ಮ ಹಿಂದೂಪರವಾದವನ್ನು ಮತ್ತಷ್ಟು ಪ್ರಶ್ನಿಸಲಾರೆ. ತಾವಂತೂ ಹಿಂದುಗಳು. ತಮಗೆ ರಾಮ-ಕೃಷ್ಣರಷ್ಟೇ ಮನು ಋಷಿಯೂ ಆ ಪುಣ್ಯಾತ್ಮ ಬರೆದ ವಿಕೃತಸ್ಮೃತಿಯೂ ನಿಮ್ಮ ಪಾಲಿಗೆ ಪರಮ ಪವಿತ್ರ. ಮನುಷ್ಯತ್ವವನ್ನೇ ಬೋಧಿಸದ, ಬ್ರಾಹ್ಮಣರನ್ನು ಬಿಟ್ಟು ಉಳಿದವರನ್ನು ಮನುಷ್ಯರೇ ಅಲ್ಲ ಎಂದು ಘಂಟಾಘೋಷವಾಗಿ ಸಾರಿದ ಮನುಸ್ಮೃತಿ ನಿಮ್ಮಂತವರ ಹಿಂದುತ್ವವಾದಕ್ಕೆ ತಳಹದಿ. ಮಹಿಳೆಯರನ್ನು, ದುಡಿಯುವ ವರ್ಗವನ್ನೇ ಧಿಕ್ಕರಿಸುವ, ದಲಿತರು, ದೀನರು, ಅಸಹಾಯಕರನ್ನು ಪಶುಗಳಿಗಿಂತ ಕೀಳೆಂದು ಭಾವಿಸುವ ಮನುಸ್ಮೃತಿಯೇ ನಿಮ್ಮ ಬಿಜೆಪಿಯ ಹಿಡನ್ ಅಜೆಂಡಾದಲ್ಲಿ ಕೆಲವು ಸಾಲುಗಳಲ್ಲಿ ಮರುರೂಪ ಪಡೆದಿರಲೂಬಹುದು. ಹೀಗೆ ಮನುಷ್ಯತ್ವವನ್ನೇ ಧಿಕ್ಕರಿಸುವ, ಮನುಷ್ಯರನ್ನು ಪ್ರೀತಿಸದ ಹಿಂದೂ ಧರ್ಮ ತಮ್ಮದೆಂದು ಹೇಳಿಕೊಳ್ಳುವಲ್ಲಿ ಅದಕ್ಕೇ ಬಹುಸಂಖ್ಯಾತ ಜನಸಾಮಾನ್ಯರಿಗೆ ಹೇಸಿಕೆ ಅನ್ನಿಸುತ್ತಿರುವುದು. ನಿಮಗೆ ಕೇವಲ ಹಿಂದೂಗಳ ಮತಗಳು ಸಾಕು ಎಂದು ಹೇಳಿರುವುದಕ್ಕೆ ಒಪ್ಪಿಗೆಯಿದೆ. ಜನರಿಗೆ ನಿಮ್ಮ ಹಿಡನ್ ಅಜೆಂಡಾದಲ್ಲಿರುವ ಮನುಷ್ಯತ್ವ ವಿರೋಧಿ ನಿಲುವುಗಳನ್ನು ಬಹಿರಂಗಗೊಳಿಸಿ ಮತಯಾಚಿಸಿ ಆಗ ಜನ ನಿಮ್ಮನ್ನು ಹೇಗೆ ಸ್ವಾಗತಿಸುತ್ತಾರೆ ಎಂಬುದು ಅರ್ಥವಾಗುತ್ತದೆ. ಹೆಗಡೆಯವರೆ, ಚುನಾವಣಾ ಆಯೋಗಕ್ಕೆ ನೀವು ಸವಾಲು ಹಾಕಿದಂತೆ ನಿಮಗೂ ಒಂದೂ ಸವಾಲು ಹಾಕುತ್ತಿದ್ದೇನೆ. ಸೋ ಕಾಲ್ಡ್ ಹಿಂದೂಗಳ ಬಳಿ ಹೋಗಿ ನೀವು ಮತಯಾಚಿಸಿ. ಅವರು ನಿಮಗೂ ಗೊತ್ತಿರುವಂತೆ ಶೇ.30-35ರಷ್ಟು ಜನ ಮಾತ್ರ ಮತಗಟ್ಟೆಗೆ ಬರುವುದು, ಓಟು ಹಾಕುವುದು. ಬೆರಳೆಣಿಕೆಯ ಪ್ರತಿಶತ ಜನಸಂಖ್ಯೆ ಹೊಂದಿರುವ ಸೋಕಾಲ್ಡ್ ಹಿಂದೂಗಳಿಂದ ತಾವು ಮತ ಹಾಕಿಸಿಕೊಂಡು ಗೆಲ್ಲುವಿರಾದರೆ ನಿಮ್ಮ ಹೇಳಿಕೆಗೂ ಅರ್ಥ ಬರುತ್ತದೆ. ನಿಮಗೆ ಎಷ್ಟು ಸಾವಿರ ಮತಗಳು ಬರುತ್ತವೆ ಎಂಬುದನ್ನು ತಿಳಿಯಲು ನನಗೂ ಭಾರಿ ಕುತೂಹಲ. ಆದರೆ 'ಹಿಂದೂಪರ' ಎಂಬ ಮುಖವಾಡ, ಅಲ್ಪಸಂಖ್ಯಾತರನ್ನು ತೆಗಳಿ, ಜನರಲ್ಲಿ ಸಿಟ್ಟು, ವೈರತ್ವ, ದ್ವೇಷ ಉಕ್ಕಿಸುವ ರೀತಿಯಲ್ಲಿ ಮಾತನಾಡದೆ ನೇರವಾಗಿ ನಿಮ್ಮನ್ನು ಪೊರೆಯುವ ನಿಮ್ಮಂತೆಯೇ ಮಧ್ಯ ಏಷ್ಯಾದಿಂದ ವಲಸೆ ಬಂದ ಆರ್ಯರೆನ್ನಿಸಿಕೊಳ್ಳುವ ಇಂಡಿಯಾದ ಮೂಲನಿವಾಸಿಗಳೂ ಅಲ್ಲದ ಸೋ ಕಾಲ್ಡ್ ಹಿಂದೂಗಳ ಮತಗಳಷ್ಟೇ ನಿಮಗೆ ದೊರೆಯಲಿ. ನಿಮ್ಮಂತಾ ಮನುಷ್ಯವಿರೋಧಿ ಜನಕ್ಕೆ ಧಿಕ್ಕಾರವಿರಲಿ. ನಿಮ್ಮ ನಾಲಿಗೆ, ವರ್ತನೆಗೆ ಕಡಿವಾಣ ಹಾಕುವಷ್ಟು ದೇಶದ ಕಾನೂನು, ಕಾಯ್ದೆ, ಸಂವಿಧಾನ, ವ್ಯವಸ್ಥೆ ದಿಟ್ಟತನ ತೋರಲಿ.
-ಕಲಿಗಣನಾಥ ಗುಡದೂರು