ಸೋಮವಾರ, ಮಾರ್ಚ್ 9, 2009

ನಮ್ಮೆಲ್ಲರ ನಲ್ಮೆಯ ಮೇಸ್ಟ್ರು


ಬೈ ಟು ಟೀ ಕುಡಿಯುತ್ತಾ... ಲಂಕೇಶ ನೆನಪು!



ಲಂಕೇಶ ಇವತ್ತು ಇಲ್ಲ ಎಂದೇ ಎಲ್ಲರೂ ಮಾತನಾಡುವುದು ಉಂಟು. ಹೈದರಾಬಾದ್ ಕನರ್ಾಟಕ ಪ್ರದೇಶದ ಎಲ್ಲ ಆಕಾರ, ವಿಕಾರ ಹೊಂದಿದ ಸಿಂಧನೂರಿನ ಸುಕಾಲಪೇಟೆ ರಸ್ತೆಗುಂಟ ನಾಲ್ಕು ಹೆಜ್ಜೆ ಹಾಕಿದರೆ ಎಡಕ್ಕೆ ನಾಲ್ಕಾರು ತಳ್ಳುಗಾಡಿಗಳಲ್ಲಿ ಕಾಯಿಪಲ್ಯೆ ಮಾರುವವರ ಮಧ್ಯೆ ಮಸಾಲೆ ಸಾಮಾನು ಮಾರುವ ಮತ್ತೊಂದು ತಳ್ಳುಗಾಡಿ ಕಣ್ಣಿಗೆ ಕಾಣುತ್ತದೆ. ಅಲ್ಲಿ ಈಗಲೂ ನಮ್ಮ ನಿಮ್ಮೆಲ್ಲರ ಪ್ರೀತಿಯ ಲಂಕೇಶ ಮೇಸ್ಟ್ರು ಜೀವಂತವಿದ್ದಾರೆ. ಇಂದಿಗೂ ಉಸಿರಾಡುತ್ತಾರೆ. ಹಿಂದಿನ ಮೆಣಸಿನಕಾಯಿ ಮಾರುಕಟ್ಟೆಯ ಘಾಟಿಗೂ ಹೆದರದೆ ಪುಟ್ಟ ತಳ್ಳುಗಾಡಿಯಲ್ಲಿ ಠಿಕಾಣಿ ಹೂಡಿದ್ದಾರೆ ಲಂಕೇಶ. ಏಳನೇ ಇಯತ್ತೆ ಓದಿದೋರು ಅಂದರೆ ಅನಕ್ಷರಸ್ಥ ಎಂಥಲೇ ತಿಳಿಯುವ ಸಂಪ್ರದಾಯದಲ್ಲಿ ಏಳನೇ ಇಯತ್ತೆ ಓದಿ, ಲಂಕೇಶರ ಬಗ್ಗೆ ಅಪಾರ ಪ್ರೀತಿ ಹೊಂದಿದ ಮಸಾಲೆ ಸಾಮಾನು ಮಾರುವ ಮುನ್ನಾ ಎಂಬ ಪ್ರೀತಿಯ ಹುಡುಗನಿರುವುದೇ ನನ್ನಂಥವ ಅದೆಷ್ಟು ಜೀವಂತಿಕೆಯಿಂದ ಬದುಕುತ್ತಿರುವುದು. ಲಂಕೇಶರ ದಿಟ್ಟತನಕ್ಕೂ ನಮ್ಮ ಮುನ್ನಾ ಮುದುಡಿಕೊಂಡೇ ಇರುವ, ಮಾತನಾಡುವ ಪರಿ ಅಜಗಜಾಂತರ. ಲಂಕೇಶರ ಜನುಮದಿನದಂದು ಅವರ ನೆನಪನ್ನು ಯಾರೊಂದಿಗೆ ಹಂಚಿಕೊಳ್ಳಲಿ ಎಂದು ಯೋಚಿಸಿದಾಗ ಥಟ್ಟನೆ ಹೊಳೆದವನು ಗೆಳೆಯ ಮುನ್ನಾ. 'ಎಲ್ಲಿ ಇದ್ದಿ ಮುನ್ನಾ? ನನ್ನೊಂದಿಗೆ ಬೈ ಟು ಟೀ ಕುಡಿಯಲು ಬರ್ತಿಯಾ?' ಕೇಳಿದೆ. ಅತ್ಯಂತ ಸಂಭ್ರಮದಿಂದಲೇ ಬಂದ ಮುನ್ನಾ ಕಣ್ಣು, ಮನಸ್ಸುಗಳಲ್ಲಿ ಲಂಕೇಶ ತುಳುಕಾಡುತ್ತಿದ್ದರು. ಬೈ ಟು ಟೀಗೆ ಆರ್ಡರ್ಮಾಡಿ ಮಾತಿಗೆಳೆದೆ. ನನಗೆ ದಕ್ಕಿದ ಲಂಕೇಶ ಮತ್ತಷ್ಟು ಅಜಾನುಬಾಹುವಿನಂತೆ ಕಂಡರು ಮುನ್ನಾ ಮನಬಿಚ್ಚಿ ಮಾತನಾಡಿದಾಗ. ಏಳನೇ ತರಗತಿಗೆ ನಾನು ಓದಿಗೆ ಶರಣು ಹೊಡೆದೆ. ನನ್ನ ಚಿಕ್ಕಪ್ಪ ಅಬ್ದುಲ್ಸಾಬ್ ಕಿರಾಣಿ ಅಂಗಡಿಯಲ್ಲಿ ಕೈ ಬಾಯಿ ಕೆಲಸ ಕೇಳುತ್ತಿದ್ದೆ. ಆತ ವಿವಿಧ ಪತ್ರಿಕೆಗಳನ್ನು ತರಿಸುತ್ತಿದ್ದ. ಲಂಕೇಶ ಪತ್ರಿಕೆಯೂ ಒಂದು. ಲಂಕೇಶ ಪ್ರಪಂಚ ಪರಿಚಯವಾಗಿದ್ದು ಆಗಿನಿಂದಲೇ. ಲಂಕೇಶರನ್ನು ಮುನ್ನಾ ಎಷ್ಟು ಹಚ್ಚಿಕೊಂಡಿದ್ದ ಎಂಬುದನ್ನು ಹೇಳಿ ಮತ್ತೆ ಆತನ ಮಾತುಗಳನ್ನು ಓದಲು ಅವಕಾಶ ಕೊಡುವೆ. ಲಂಕೇಶರ ಆತ್ಮಕಥೆ 'ಹುಳಿಮಾವಿನ ಮರ'ವನ್ನು ತರಿಸಿ, ಎರಡ್ಮೂರು ಬಾರಿ ಓದಿದ ಮುನ್ನಾ, ತನ್ನ ಡಗ್ಲಾಸ್ ಸೈಕಲ್ನ್ ಚೈನ್ ಕವರಿನ ಮೇಲೆ ಬರೆಸಿದ್ದು ಯಾವುದೇ ಸಿನಿಮಾದ ಹೆಸರಲ್ಲ ಹೊರತಾಗಿ 'ಹುಳಿಮಾವಿನ ಮರ'. ಅವನ ಸೈಕಲ್ ಕಂಡೊಡನೆ ನನ್ನ ಕಣ್ಣುಗಳು ಮೊದಲು ನೋಡುತ್ತಿದ್ದುದು ಮುನ್ನಾ ಪ್ರೀತಿಯಿಂದ ಬರೆಯಿಸಿದ್ದ 'ಹುಳಿಮಾವಿನ ಮರ'. ಲಂಕೇಶರು ಮುನ್ನಾನನ್ನು ಆವರಿಸಿದ್ದು ಅಷ್ಟಿಷ್ಟಲ್ಲ. ಯಾವುದೇ ವಿಶ್ವವಿದ್ಯಾಲಯದ ಬಹುತೇಕ ಕನ್ನಡ ಸೇರಿದಂತೆ ಇತರೆ ಸಾಹಿತ್ಯದ ವಿದ್ಯಾಥರ್ಿಗಳು ಓದದಷ್ಟು ಲಂಕೇಶರ ಪುಸ್ತಕಗಳನ್ನು ಓದಿದ್ದಾನೆ. ಬರೀ ಪರೀಕ್ಷೆಗಾಗಿ ಕಾಟಾಚಾರಕ್ಕೆಂಬಂತೆ ಓದಿಲ್ಲ. ಓದಿ ತನ್ನ ಜೀವನದಲ್ಲಿ ಎದುರಾದ ಅನೇಕ ಕಷ್ಟ, ನಷ್ಟಗಳನ್ನು ಎದುರಿಸಿದ್ದಾನೆ. ಮತ್ತಷ್ಟು ಉತ್ತಮನಾಗಲು ಯತ್ನಿಸಿದ್ದಾನೆ. ಆತನಿಗೆ ಮೋಡಿ ಮಾಡಿದ್ದು 'ಗುಣಮುಖ' ನಾಟಕ. ಲಂಕೇಶ ಇವತ್ತು ನಮ್ಮೊಂದಿಗೆ ಭೌತಿಕವಾಗಿ ಇರದಿದ್ದರೂ ಅವರ ಕೃತಿಗಳಿವೆ. ಅವರ ವಿಚಾರಗಳಿವೆ ಎಂದೇ ಸ್ವಲ್ಪ ಮಟ್ಟಿಗೆ ಸಮಾಧಾನ ಪಟ್ಟುಕೊಳ್ಳುವ ಮುನ್ನಾ, ಲಂಕೇಶರು, 'ಗುಣಮುಖ' ಹಕೀಂ ಅಲಾವಿಖಾನ್ನಂತೆ ಎಂದು ಅಭಿಮಾನಪಡುತ್ತಾನೆ. ನಾದಿರ್ಷಹಾನ ರೋಗಗ್ರಸ್ತ ಮನಸ್ಸನ್ನು ಗುಣಮುಖಮಾಡಿದ ಹಾಗೆ ಇಂದು ಎಲ್ಲೆಡೆ ಕಾಣುವ ರೋಗಗ್ರಸ್ತ ಮನಸ್ಸುಗಳನ್ನು ಗುಣಮುಖಮಾಡುವ ಕನ್ನಡದ ನೈಜ ಹಕೀಂ ಅಲಾವಿಖಾನ್ ಜೊತೆ ಇರದಿದ್ದರೂ ನಾವೆಲ್ಲರೂ ಹಕೀಂನಂತಾಗುವ ಅನಿವಾರ್ಯತೆಯಿದೆ. ನಾದಿರ್ಷಹಾನಂತೆ ಎಲ್ಲಾ ರೋಗಗ್ರಸ್ತ ಮನಸ್ಸುಗಳು ಗುಣಮುಖವಾದರೆ ಸುತ್ತಲಿನ ಪ್ರಪಂಚ, ಬದುಕು ಎಷ್ಟು ಸುಂದರವಾಗಿರುತ್ತದೆ ಎಂದಾಗ ಮುನ್ನಾನ ಕಣ್ಣುಗಳಲ್ಲಿ ನೂರು ಚುಕ್ಕೆಗಳು ಮಿನುಗಿದವು. ಲಂಕೇಶರ 'ಪಾಪದ ಹೂಗಳು', 'ಕಲ್ಲು ಕರಗುವ ಸಮಯ', 'ಗಿಳಿಯು ಪಂಜರದೊಳಗಿಲ್ಲ', 'ಹುಳಿಮಾವಿನ ಮರ', 'ಟೀಕೆ ಟಿಪ್ಪಣೆ ಭಾಗ-1, ಭಾಗ-2' ಹೀಗೆ ಹಲವು ಕೃತಿಗಳನ್ನು ಓದಿದ ಮುನ್ನಾ ಈಗಲೂ ತಾನು ಹತ್ತಾರು ವರ್ಷಗಳ ಹಿಂದೆ ಓದಿದ್ದನ್ನು ಈಗಲೂ ನಿನ್ನೆ, ಮೊನ್ನೆ ಓದಿದಂತೆ ಅಲ್ಲಿಯ ಘಟನೆ, ಪಾತ್ರಗಳು ಮತ್ತು ಚಿತ್ರಣಗಳನ್ನು ಬಿಚ್ಚಿಡುತ್ತಾನೆ. ಇದೆಲ್ಲಾ ಆಶ್ಚರ್ಯವೆನಿಸಿದರೂ, ತಾನು ಮಾರುವ ಮಸಾಲೆ ಸಾಮಾನುಗಳಿಗಿಂತಲೂ ಹೆಚ್ಚು ನೆನಪು ಇಟ್ಟಿರುವುದು ಲಂಕೇಶರ ಟೀಕೆ ಟಿಪ್ಪಣೆಗಳನ್ನು. 'ಲಂಕೇಶ ನಿನಗೆ ಯಾಕೆ ಇಷ್ಟವಾದರು?' ಎಂದು ಟೀ ಗುಟುಕರಿಸುತ್ತಾ ಕೇಳಿದೆ. ಕುಡಿಯುತ್ತಿದ್ದ ಟೀ ಕಪ್ನ್ನು ಟೇಬಲ್ ಮೇಲಿಟ್ಟು ಟೀ ಆರದಿರಲೆಂದು ಅಂಗೈ ಮುಚ್ಚಿ ಮಾತನಾಡಿದ. ಲಂಕೇಶ ಮನಸ್ಸು ಮಾಡಿದ್ದರೆ ರಾಜನಂತೆ ಬದುಕಬಹುದಾಗಿತ್ತು. ಹಣ, ಅಂತಸ್ತು, ಸ್ಥಾನ ಮಾನಗಳಿಗೆ ಬಡಿದಾಡುವ ಇಂದಿನ ದಿನಗಳಲ್ಲಿ ಲಂಕೇಶ ಒಂದು ಅಪವಾದದಂತೆ ಬದುಕಿದರು. ಅವರ ನಿಸ್ವಾರ್ಥ ಬದುಕು ನನಗೆ ಇಷ್ಟ. ಅವರ ಬರೆಹ ಮತ್ತು ಬದುಕು ಒಂದೇಯಾಗಿದ್ದುದು ಮತ್ತಷ್ಟು ಅವರನ್ನು ಹಚ್ಚಿಕೊಳ್ಳಲು ಕಾರಣ. ಥೇಟ್ ಹಳ್ಳಿಯ ಅನುಭವಿ ವ್ಯಕ್ತಿಯಂತೆಯೇ ಲಂಕೇಶ ಕೊನೆಯವರೆಗೂ ಬದುಕಿದರು. ಅವರ 'ಮುಟ್ಟಿಸಿಕೊಂಡವರು' ಕಥೆ ಓದಿದ ನಂತರವೇ ನನ್ನ ಮನದ ಮೂಲೆಯಲ್ಲಿದ್ದ ಚೂರು ಅದೆಂಥದೊ 'ಅವರನ್ನು, ಅಂಥವರನ್ನು' ಮುಟ್ಟಿಸಿಕೊಳ್ಳಬಾರದೆನ್ನುವ ಭಾವನೆ ಬದಲಾಗಿದ್ದು. ಮತ್ತೊಂದು ಕಥೆ 'ಬಾಗಿಲು' ಕೂಡ ಅಷ್ಟೆ. ಅರ್ಹರಿಗೆ ಸಹಾಯ ಮಾಡುವುದು ತಪ್ಪಲ್ಲ; ಆದರೆ ಸಹಾಯಕ್ಕೆ ಮುನ್ನಾ ಪೂವರ್ಾಪರ ವಿಚಾರಮಾಡಬೇಕೆನ್ನುವ ಲಂಕೇಶರ 'ಬಾಗಿಲು' ಕಥೆಯ ಥೀಮ್ ನನ್ನನ್ನು ಈಗಲೂ ಕಾಡುತ್ತಿರುತ್ತದೆ. ಸಮಾಜದ ಓರೆ ಕೋರೆ ತಿದ್ದುವಲ್ಲಿ ಲಂಕೇಶರ ಪಾತ್ರ ಅದ್ವಿತೀಯ ಎಂಬುದು ಕೇವಲ ಬಾಯುಪಚಾರದ ಮಾತಲ್ಲ. ಅವರ ಒಂದು ಲೇಖನಕ್ಕೆ ಸಕರ್ಾರ ಉರುಳಿಸುವ ಶಕ್ತಿಯಿತ್ತು ಎಂಬುದು ಹಿಂದಿನ ಫ್ರಾನ್ಸ್ ಮಹಾಕ್ರಾಂತಿಯನ್ನು ನೆನಪಿಸುತ್ತದೆ. ಅವರ ಬರವಣಿಗೆಯಲ್ಲಿ ಸತ್ಯನಿಷ್ಠತೆ, ಜೀವಂತಿಕೆ, ಜೀವಪರತೆ, ನಿಷ್ಠುರತೆ ಇಂದಿನ ಪತ್ರಿಕೆಗಳ ವರದಿಗಾರರು, ಸಂಪಾದಕರೂ ಮೈಗೂಡಿಸಿಕೊಳ್ಳಬೇಕಿದೆ ಎಂದು ಪ್ರೀತಿಯಿಂದಲೇ ತನ್ನ ಕಳಕಳಿ ಹೊರಹಾಕುತ್ತಾನೆ ಮುನ್ನಾ. ಲಂಕೇಶ ಪತ್ರಿಕೆಯ ಭಾಗವಾಗಿದ್ದ ಪುಂಡಲೀಕಶೇಠ್ ಬರೆಯುತ್ತಿದ್ದ 'ಹುಬ್ಬಳ್ಳಿಯಾಂವ' ಅಚ್ಚುಮೆಚ್ಚು. ನನ್ನಂಥವವನಿಗೆ ಎಲ್ಲಿಗೂ ಹೋಗಲು ಆಗಲ್ಲ. ಲಂಕೇಶರ ಟೀಕೆ ಟಿಪ್ಪಣಿ ಮೂಲಕ ಜಗತ್ತಿನ ವಿವಿಧ ಪ್ರದೇಶ, ಜನಾಂಗ, ವಿಭಿನ್ನ ಸಂಸ್ಕೃತಿಗಳನ್ನು ಪರಿಚಯಿಸಿದ ಜೊತೆಗೆ ನನ್ನ ಅಲ್ಪ ಫಾರ್ಮಲ್ ಓದಿಗೆ ಇನ್ಫಾರ್ಮಲ್ ಆಗಿ ಜ್ಞಾನ ಹೆಚ್ಚಿಸಿದವು. 'ನೀಲು' ಬಗ್ಗೆ ಪ್ರತಿ ಸಂಚಿಕೆಯಿಂದ ಮತ್ತೊಂದಕ್ಕೆ ಕುತೂಹಲ ಇರುತ್ತಿತ್ತು. 'ನಿಮ್ಮಿ ಕಾಲಂ' ಬರೆಯುತ್ತಿದ್ದುದು ಹುಡುಗಿ ಎಂದೇ ತಿಳಿದಿದ್ದೇ ಎಂದು ಮುನ್ನಾ ಮುಗುಳ್ನಕ್ಕ. ನಂತರ ಗೊತ್ತಾಗಿ... ಏನೂ ಹೇಳದೆ ಕಿರುನಗೆ ಬೀರಿದ. ಲಂಕೇಶರ ಬರೆಹಗಳಿಂದ ಅಷ್ಟೊಂದು ಪ್ರೇರಣೆ, ಪ್ರಭಾವಕ್ಕೆ ಒಳಗಾಗಿಯೂ ಯಾಕೆ ಬರೆಹಗಾರನಾಗಲಿಲ್ಲ? ಎನ್ನುವ ಪ್ರಶ್ನೆಗೆ ನನ್ನ ನಿರೀಕ್ಷೆ ಮೀರಿ ಉತ್ತರಿಸಿದ. 'ನನಗೆ ಊಟ ಮಾಡೋದು ಗೊತ್ತು. ಅಡುಗೆ ಮಾಡಲು ಬರೊಲ್ಲ' ಎಂದು ನನ್ನಂಥವ ಬರೆಹಗಾರನಾಗಿ ಏನೆಲ್ಲಾ ಬರೆಯಬೇಕೆಂಬ ಗರ್ವ, ಅಭಿಮಾನವನ್ನು ಟೀ ಕುಡಿದ ಖಾಲಿ ಕಪ್ಪನ್ನು ಕೆಳಗೆ ಇಟ್ಟಂತೆ ಇಟ್ಟುಬಿಟ್ಟ. ಲಂಕೇಶರು ಜೀವಂತವಿದ್ದಾಗಲೇ ಅವರನ್ನು ಖುದ್ದಾಗಿ ನೋಡಬೇಕೆಂಬ ಆಸೆಯಿತ್ತು. ಅದು ನನ್ನಂಥವನಿಗೆ ಅಸಾಧ್ಯವೆನಿಸಿತು. ದುಡಿಯುವುದೇ ಹತ್ತಿಪ್ಪತ್ತು ರೂಪಾಯಿ. ಇನ್ನು ನೂರಾರು ರೂಪಾಯಿ ಖಚರ್ುಮಾಡಿ ಬೆಂಗಳೂರಿಗೆ ಹೋಗಿ ಭೇಟಿಯಾಗುವುದು ಕನಸಿನ ಮಾತೇ ಆಗಿತ್ತು. ಕಡೆ ಅವರೇನಾದರೂ ಬಂದಿದ್ದರೆ ನೋಡಬಹುದಿತ್ತು. ಇರಲಿ ಬಿಡಿ. ಅವರನ್ನು ನೋಡಲೇಬೇಕೆಂದೇನೂ ಇಲ್ಲ. ಅವರು ತೀರಿಕೊಂಡ ಸುದ್ದಿಯನ್ನು ಪೇಪರ್ನಲ್ಲಿ ಓದಿದ ಕ್ಷಣವೇ ಕಣ್ಣುಗಳು ತೇವಗೊಂಡವು. ನನಗೆ ಮತ್ತು ನಮ್ಮ ಮನೆಯ ಕಂಬವೇ ಆಗಿದ್ದ ಲಂಕೇಶ ಇನ್ನಿಲ್ಲವಾದರು ಎಂಬಂತೆ ಅನ್ನಿಸಿತು. ಛೆ... ನಮ್ಮ ಮನೆಯ ಸದಸ್ಯರು ತೀರಿಕೊಂಡಾಗ ಅಷ್ಟು ದುಃಖವಾಗಿರಲಿಲ್ಲ. ಮುಖ ತಗ್ಗಿಸಿದ ಮುನ್ನಾ ಖಾಲಿ ಕಪ್ಪು ನೋಡುತ್ತಾ ಕುಳಿತ. ಹೆಗಲ ಮೇಲೆ ಅಂಗೈಯಿಟ್ಟು 'ಬಾ ಹೊರಗೆ ಹೋಗೋಣ...' ಎಂದೆ. ಮತ್ತೆ ಅವನು ಸುಕಾಲಪೇಟೆಯ ಮಸಾಲೆ ಸಾಮಾನು ಮಾರುವ ತಳ್ಳುಗಾಡಿಯತ್ತ ನಡೆದ... ಅವನು ಹೋದ ಹಾದಿಯನ್ನೇ ಕೆಲ ಕಾಲ ದಿಟ್ಟಿಸುತ್ತಾ ನಿಂತೆ. ಲಂಕೇಶ ಅವನಲ್ಲಿ... ಇನ್ನೂ ಹಲವರಲ್ಲಿ ಮೈ ಚರ್ಮದಂತೆ ಇದ್ದಾರೆ ಅಂತ ಅನ್ನಿಸಿತು.


-ಕಲಿಗಣನಾಥ ಗುಡದೂರು