ಮಂಗಳವಾರ, ಜನವರಿ 20, 2009

ಚೂರಾದ ಚಿತ್ರಗಳ ಆಯುತ್ತಾ...

ಕಳೆದ ವರ್ಷವಷ್ಟೆ ನಿಮ್ಮ ಓದಿಗೆೆ ನನ್ನ ಎರಡನೇ ಬಹು ನಿರೀಕ್ಷಿತ ಹಾಗೂ ಚಚರ್ಿತ ಮತಾಂತರ ಕಥಾ ಸಂಕಲನ ನೀಡಿದ ನಂತರ ಮೂರನೇ ಕಥಾ ಸಂಕಲನ ಮಾಮೂಲಿ ಗಾಂಧಿಯನ್ನು ನಿಮ್ಮ ಮನೆಗೆ ಕಳಿಸುತ್ತಿದ್ದೇನೆ. ಈ ವರ್ಷ ನನ್ನ ಜೀವನದ ಜೋಕಾಲಿ ಹರಿದು ಬಿದ್ದದ್ದು ಎಷ್ಟು ಸಲವೊ? ಮತ್ತೆ ಸಾವರಿಸಿಕೊಳ್ಳುತ್ತಾ ಕನಸಿನ ಗಿಡಕ್ಕೆ ಹಗ್ಗ ಕಟ್ಟಿದ್ದೆಷ್ಟು ಸಲವೊ? ಹಾಗೆ ಗೆದ್ದೆನೆಂದು ಜೀಕುತ್ತಾ ಹರಿಸಿದ ಕಣ್ಣೀರು, ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬಹು ಒತ್ತಡದಲ್ಲಿ ಕೆಲಸ ಮಾಡುತ್ತಿರುವ ನನ್ನಲ್ಲಿಯ ಕಥೆಗಾರ ಮಾಮೂಲಿ ಗಾಂಧಿ ಕಥಾ ಸಂಕಲನದಲ್ಲಿ ಬಹಳ ಬದಲಾಗಿದ್ದಾನೆ. ಸಿದ್ಧ ಮಾದರಿ ಹಾಗೂ ಎಲ್ಲ ಇಸಂಗಳನ್ನು ಮೀರಿ ಹಾಗೆ ಸುಮ್ಮನೆ ಬರೆಯಬೇಕೆಂಬ ತುಡಿತ ಹಾಗೂ ಬಹು ನಿರೀಕ್ಷೆಯೊಂದಿಗೆ ಈ ಕಥೆಗಳನ್ನು ಬರೆದಿರುವೆ. ನಾನು ನನಗಿಂತಲೂ ಹೆಚ್ಚು ಪ್ರೀತಿಸುತ್ತಿದ್ದ ಜೀವದ ಗೆಳತಿ ಶಿವಲೀಲಾ ಅದೆಷ್ಟು ಬೇಗನೆ ನನ್ನಿಂದ ಭೌತಿಕವಾಗಿ ದೂರವಾಗಿಬಿಟ್ಟಳು. ನನ್ನ ಪ್ರೀತಿಯೇ ಆಕೆಗೆ ಉರುಳಾಯಿತೊ? ಸುತ್ತಲಿನ ಮನಸ್ಸುಗಳ ಮಾತು ಉರುಳಾದವೊ? ಆಕೆಯನ್ನು ಕಳೆದುಕೊಂಡು ಕಳೆದ ಏಳೆಂಟು ತಿಂಗಳುಗಳಿಂದ ನಾನು ಬದುಕಿದ್ದು ಥೇಟ್ ಸಂತನಂತೆಯೇ! ಮನಸ್ಸು ಒಡೆದ ಕನ್ನಡಿಯಾಯಿತು. ಚೂರಾದ ಕನ್ನಡಿಯ ತುಣುಕುಗಳಲಿ ಕಂಡ ಚಿತ್ರ ವಿಚಿತ್ರ ನಿಲುವುಗಳನ್ನು ಸೂಕ್ಷ್ಮವಾಗಿ ನೋಡಿದೆ. ದಿನಕ್ಕೆ ಹದಿನೈದು ತಾಸುಗಳ ಕೆಲಸದ ಒತ್ತಡದ ಮಧ್ಯೆಯೂ ನನಗೇ ಗಾಬರಿಯಾಗುವಂತಾ ಕಥೆಗಳನ್ನು ಬರೆದೆ. ಹಿಂದಿನ ಉಡಿಯಲ್ಲಿಯ ಉರಿ (2000, ಲೋಹಿಯಾ ಪ್ರಕಾಶನ, ಬಳ್ಳಾರಿ) ಮತ್ತು ಮತಾಂತರ (2007, ಸಂಸ್ಕೃತಿ ಪ್ರಕಾಶನ, ಬಳ್ಳಾರಿ) ಕಥಾ ಸಂಕಲನಗಳಿಗಿಂತ ಭಿನ್ನವಾದ ಕಥೆಗಳನ್ನು ಬರೆದ ಖುಷಿಯಲ್ಲೆ ಏನೆಲ್ಲವನ್ನೂ ಸ್ವಲ್ಪ ಮಟ್ಟಿಗಾದರೂ ಮರೆಯಲು ಸಾಧ್ಯವಾಯಿತು. ತೀರಾ ಸಾಮಾನ್ಯವೆನಿಸುವ ಹಾಗೆ ಬಹುವಾಗಿ ಕಾಡಿದ ಅನೇಕ ಸಂಗತಿಗಳು ಮಾಮೂಲಿ ಗಾಂಧಿ ಕಥಾ ಸಂಕಲನದಲ್ಲಿ ಕಥೆಗಳಾಗಿ ರೂಪುಗೊಂಡಿವೆ. ಬರೆಹಗಾರನೆಂದರೆ ಕೇವಲ ಅಕ್ಷರಗಳ ಮೂಲಕ ಯುಟೋಪಿಯಾ ಸೃಷ್ಟಿಸುವುದಲ್ಲ. ಸುತ್ತಲಿನ ಬದುಕಿನ ಏರು ಇಳಿವುಗಳಲ್ಲಿ ಹತ್ತಿ ಇಳಿಯಬೇಕು. ಸಮಾಜಮುಖಿ ಪ್ರಜ್ಞೆ, ಮನುಷ್ಯತ್ವದ ನೆಲೆ, ಸಾಧ್ಯವೆನಿಸಬಹುದಾದ ಕಲ್ಪನೆಗಳೇ ನನ್ನ ಕಥೆಗಳ ತಿರುಳು ಎಂಬುದು ನನ್ನ ಗ್ರಹಿಕೆ. ವಿವಿಧ ಪತ್ರಿಕೆಗಳ ಸಾಪ್ತಾಹಿಕ ಪುರವಣಿ ಮತ್ತು ಸಾಹಿತ್ಯ ವಿಭಾಗ ಬದಲಾಯಿಸಿಕೊಂಡ ಕಥಾ ಪ್ರಕಟಣಾ ನೀತಿಯಿಂದ ಕಥೆಗಳ ಪ್ರಕಟಣೆಯೇ ದೊಡ್ಡ ಸಮಸ್ಯೆ ಎನಿಸಿದೆ. ಇದು ನನ್ನೊಬ್ಬನ ಸಮಸ್ಯೆಯಲ್ಲ; ಗೆಳೆಯ ಸಾಲಿಯಿಂದ ಹಿಡಿದು ಹಿರಿಯ ಕಥೆಗಾರ ಕುಂವಿಯವರೆಗೂ ಕಥೆಗಳನ್ನು ಪ್ರಕಟಿಸುವುದು, ಆ ಮೂಲಕ ಓದುಗರನ್ನು ತಲುಪುವುದು ಕಷ್ಟವೆನಿಸಿದೆ. ಕನ್ನಡ ಕಥಾಲೋಕ ಹೈದರಾಬಾದ್ ಕನರ್ಾಟಕ ಪ್ರದೇಶದ ಕಥೆಗಾರರನ್ನು ಬಹು ಅಚ್ಚರಿಯಿಂದ ನೋಡುತ್ತಿರುವುದು ಮತ್ತು ನಮ್ಮ ಬಗ್ಗೆ ಬಹಳ ನಿರೀಕ್ಷೆಯಿಟ್ಟುಕೊಂಡಿರುವುದಕ್ಕೆ ಮುಜುಗರದ ಜೊತೆಗೆ ಜವಾಬ್ದಾರಿಯಿಂದಲೇ ಕಥೆಗಳನ್ನು ಬರೆಯಬೇಕೆಂಬ ಒತ್ತಾಸೆ ಮೂಡುತ್ತಿದೆ. ನನ್ನಂತಾ ನಾನ್-ಅಕಾಡೆಮಿಕ್ ಪರಿಸರದಲ್ಲಿ ಬದುಕುತ್ತಿರುವ ನನ್ನ ಬಗ್ಗೆ ಸಾಹಿತ್ಯ ವಲಯ ಇನ್ನೂ ಒಂದು ತೆರನಾದ ಅಸ್ಪೃಶ್ಯತೆಯಿಂದ ಕಾಣುತ್ತಿರುವುದಕ್ಕೆ ನನಗೆ ಆಗಾಗ ಅಸಹ್ಯವೆನಿಸುವುದುಂಟು. ಅವಮಾನ, ಹೀಯಾಳಿಕೆ, ಧಿಕ್ಕರಿಸುವಿಕೆ ಎದುರಿಸಿಯೇ ಬದುಕಬೇಕೆಂದರೆ ನನಗೆ ಒಂದು ತೆರನಾದ ಖುಷಿ. ಕುಂವಿಯವರು ಆಗಾಗ್ಗೆ ನೀಡಿದ ಸಲಹೆಯಂತೆ ನನ್ನ ಪಾಡಿಗೆ ನಾನು ಕಥೆಗಳನ್ನು ಬರೆಯುತ್ತಾ ಹೋಗುತ್ತಿದ್ದೇನೆ. ರಾಜ್ಯದ ವಿವಿಧ ಭಾಗಗಳಲ್ಲಿ ನನ್ನ ಕಥೆಗಳನ್ನು ಓದಿ ತಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳುವ ನೂರಾರು ಗೆಳೆಯರಿದ್ದಾರೆ. ಬರೆದಿದ್ದೆಲ್ಲಾ ಒಳ್ಳೆಯದೇ ಎಂದು ಬೆನ್ನು ತಟ್ಟುವ ಹಿರಿಯರಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರಿನಂತಾ ಪರಿಸರದಲ್ಲೇ ಸಿಗುವ ನೂರಾರು ಕಥಾ ವಸ್ತುಗಳು ನನ್ನ ಕುತೂಹಲ ಹೆಚ್ಚಿಸಿವೆ. ಹಾಳೆಯಿಂದ ಬ್ಲಾಗ್ಗಳತ್ತ ಹೊರಳುತ್ತಿರುವ ಈ ಸಂದರ್ಭದಲ್ಲಿ ವಿವಿಧ ಬ್ಲಾಗ್ಗಳನ್ನು ಬ್ರೌಸ್ಮಾಡುತ್ತಾ ಹೊಸದರತ್ತ ಮುಖಮಾಡಿದ್ದೇನೆ. ಕಥೆಗಾರ ನವಲಕಲ್ ಮಹಂತೇಶಣ್ಣ ಒಂದು ದಿನ ಇದ್ದಕ್ಕಿದ್ದಂತೆ ಫೋನ್ಮಾಡಿ, ಗುಲ್ಬರ್ಗದ ಡಾ.ಸ್ವಾಮಿರಾವ್ ಕುಲಕಣರ್ಿಯವರು ಮತ್ತು ಅಪ್ಪಾರಾವ್ ಅಕ್ಕೋಣೆ ಮತ್ತಿತರರು ಒಂದು ಹೊಸ ಪ್ರಕಾಶನ ಹುಟ್ಟುಹಾಕಿದ್ದಾರೆ. ಮೊದಲ ಸಂಕಲನ ರೂಪದಲ್ಲಿ ನಿನ್ನ ಕಥಾ ಸಂಕಲನ ತರಲು ಬಯಸಿದ್ದಾರೆ. ಅವರಿಗೆ ಕಥೆಗಳನ್ನು ಕೊಡುತ್ತಿಯಾ? ಅಂತ ಕೇಳಿ ದಿಗಿಲು ಹುಟ್ಟಿಸಿದರು. ಅಣ್ಣಾ, ಈಗ ನನ್ನ ಬಳಿ ಇರೋದು ಐದೇ ಕಥೆಗಳು. ಅವರಿಗೆ ಬೇಕಾದಷ್ಟು ಕಥೆಗಳನ್ನು ಹೇಗೆ ಬರೆದುಕೊಡುವುದು? ಎಂದೆ. ಬರೆಯಪ್ಪಾ, ನೀನು ಹೇಗಾದರೂ ಬರೆಯುತ್ತಿ. ಎಂಟು ಕಥೆಗಳನ್ನು ಕಳಿಸು ಎಂದು ಪ್ರೀತಿಯ ಆಜ್ಞೆ ಹೊರಡಿಸಿದರು. ನನ್ನ ಕಥೆಗಳಿಗೂ ಓದುಗರಿದ್ದಾರೆ ಎಂಬುದು ಹಿಂದಿನ ಎರಡು ಕಥಾ ಸಂಕಲನಗಳು ಸಾಬೀತುಪಡಿಸಿವೆ. ಈಗಾಗಲೇ ಎರಡೂ ಕಥಾ ಸಂಕಲನಗಳ ಪ್ರತಿಗಳು ಮುಗಿದಿದ್ದರೂ ಮರುಮುದ್ರಣ ನಡೆಯಬೇಕಾಗಿದೆಯಾದರೂ ಅದಕ್ಕೆ ಯಾರಾದರೂ ಮುಂದೆ ಬರಬೇಕಲ್ಲ. ನನ್ನಿಂದಂತೂ ಎರಡೊ ಮೂರು ಹೊತ್ತು ಅರೆಬರೆ ಉಂಡು ಇದ್ದದ್ದು ಉಟ್ಟು, ನನಗೇ ಅನ್ನಿಸುವಂತೆ ತೀರಾ ಸರಳವಾಗಿ ಬದುಕಬೇಕೆಂಬ ನನಗೆ ಸ್ವಂತ ಖಚರ್ಿನಲ್ಲಿ ಸಂಕಲನ ಪ್ರಕಟಿಸಲು ದೇಹದ ಯಾವುದೋ ಒಂದು ಭಾಗ ಮಾರಬೇಕಷ್ಟೇ! ನನ್ನ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಕವಿ ಜಿ.ಎನ್.ಮೋಹನ್ ಮತ್ತು ಕಥೆಗಾರ ಅಣ್ಣ ಚಿತ್ರಶೇಖರ ಕಂಠಿ ಅವರ ಮೂಲಕ ಬಳ್ಳಾರಿಯ ಲೋಹಿಯಾ ಪ್ರಕಾಶನದ ಚಿಕ್ಕಪ್ಪ ಸಿ.ಚನ್ನಬಸವಣ್ಣನವರು 2000ರಲ್ಲಿ ಉಡಿಯಲ್ಲಿಯ ಉರಿ ಕಥಾ ಸಂಕಲನ ಪ್ರಕಟಿಸಿ ಕನ್ನಡ ಕಥಾಲೋಕಕ್ಕೆ ನನ್ನ ಪರಿಚಯಿಸಿದರು. ಅದಕ್ಕೆ ಅವರೆಲ್ಲರನ್ನೂ ನಾನು ಸದಾ ನೆನೆಯುತ್ತೇನೆ. ಏಳು ವರ್ಷಗಳ ನಂತರ ಮತ್ತೊಂದು ಸಂಕಲನಕ್ಕಾಗುವಷ್ಟು ಕಥೆಗಳಿದ್ದರೂ ಮತ್ತೆ ನನ್ನಪಾಡಿಗೆ ನಾನು ಕೈಕಟ್ಟಿ ಕುಳಿತುಕೊಂಡಿದ್ದೆ. ಬಳ್ಳಾರಿಯ ಸಂಸ್ಕೃತಿ ಪ್ರಕಾಶನದ ಪ್ರಕಾಶಕರೂ ಹಾಗೂ ಆತ್ಮೀಯ ಮಿತ್ರ ಸಿ.ಮಂಜುನಾಥ ಮತಾಂತರ ಕಥಾ ಸಂಕಲನ ಪ್ರಕಟಿಸಲು ಅದೆಷ್ಟು ಮುತುವಜರ್ಿವಹಿಸಿದರು ಎಂದರೆ ಥೇಟ್ ತಮ್ಮ ಮುದ್ದುಮಕ್ಕಳ ಮದುವೆ ಸಂಭ್ರಮದಂತೆ ಪ್ರತಿ ಹೆಜ್ಜೆಯಲ್ಲಿ ಖುಷಿಪಟ್ಟರು. ಸಿ.ಮಂಜುನಾಥ ಮತ್ತು ಪ್ರಕಾಶನದ ಗೆಳೆಯರ ಶ್ರಮದಿಂದ ಮತಾಂತರ ಹೊರಬಂದು ಮೌಲಿಕ ಕಥಾ ಸಂಕಲನವೆಂಬಂತೆ ನಾಡಿನ ವಿವಿಧ ಮಹತ್ವದ ಪತ್ರಿಕೆಗಳಿಂದ ಹೆಗ್ಗಳಿಕೆ ಪಡೆಯಿತು. ಅದಕ್ಕೆಲ್ಲಾ ಸಿ.ಮಂಜುನಾಥ ಮತ್ತು ಬಹುಮುಖ ವ್ಯಕ್ತಿತ್ವದ ಗೆಳೆಯ ವಿ.ಎಂ.ಮಂಜುನಾಥರ ಒತ್ತಾಸೆ ಕಾರಣ. ವಿ.ಎಂ. ಮಂಜುನಾಥ ಮತಾಂತರ ಕಥಾ ಸಂಕಲನಕ್ಕೆ ಅದೆಷ್ಟು ಅದ್ಭುತವಾದ ಮುಖಪುಟ ರಚಿಸಿಕೊಟ್ಟ ಎಂದರೆ ಅನೇಕ ಗೆಳೆಯರು ಬಹುವಾಗಿ ಮೆಚ್ಚಿಕೊಂಡರು. ಆತನ ಪ್ರೀತಿಯ ಮಾತು, ಮನೆಗೆ ಹೋದಾಗ ತೋರಿದ ಆತಿಥ್ಯ ಮರೆಯಲಾರದ್ದು. ಬೆಂಗಳೂರಿನಂತಾ ಊರಿನಲ್ಲಿದ್ದೂ ಹಳ್ಳಿಯಲ್ಲಿ ಬದುಕಿದಂತೆ ಬದುಕುತ್ತಿರುವ ಮಂಜುನಾಥ ನನ್ನ ಎರಡನೇ ಕಥಾಸಂಕಲನ ಮಾರಾಟದಲ್ಲಿ ತೋರಿದ ಕಳಕಳಿ ತನ್ನ ಪುಸ್ತಕ್ಕಾದರೂ ತೋರಿದ್ದಾನೊ ಇಲ್ಲೊ ಗೊತ್ತಿಲ್ಲ. ಆತನ ಮತ್ತು ತಂಗಿಯ ಪ್ರೀತಿಗೆ ಮಾರುಹೋಗಿದ್ದೇನೆ. ಅಂಥಹ ಗೆಳೆಯರ ಪ್ರೀತಿ, ಒತ್ತಾಸೆ ನನ್ನಲ್ಲಿಯ ಕಥೆಗಾರ ಜಾಗೃತಗೊಂಡು ಹೊಸ ಹೊಸ ಕಥೆಗಳನ್ನು ಬರೆಯಲಿಕ್ಕೆ ಪ್ರೇರಣೆ ನೀಡಿತು. ಆರನೇ ಕಥೆಯಾಗಿ ಕನ್ನಡಿಯೊಳಗಿನ ಚಿತ್ರಗಳು ಕಥೆಯನ್ನು ನನ್ನ ಹಿತೈಷಿಗಳಾದ ಸುಧಾ ಬಳಗದ ಮುಖ್ಯಸ್ಥ ಡಿ.ನಾಗರಾಜ ಅವರ ಪ್ರೀತಿಗೆ ಕಟ್ಟುಬಿದ್ದು ಬರೆದು ಕಳಿಸಿದೆ. ಮೊದಲ ಓದಿಗೆ ಬಹು ಮೆಚ್ಚಿಕೊಂಡರಾದರೂ ಕಥೆ ತೀರಾ ದೊಡ್ಡದಾಯಿತೆಂದು ಪ್ರಕಟಿಸಲಾಗದ್ದಕ್ಕೆ ಕೈಕೈ ಹಿಚುಕಿಕೊಂಡರು. ಕಥೆಗಾರ ಗೆಳೆಯ ರಘುನಾಥ ಚ.ಹ. ಅವರನ್ನು ಸಂಪಕರ್ಿಸಿ, ಆ ಕಥೆಯನ್ನು ಮಯೂರಕ್ಕೆ ಕಳಿಸಕೊಟ್ಟೆ. ಒಂದು ದಿನ ಫೋನ್ಮಾಡಿ ಹದಿನೈದು ನಿಮಿಷ ಕಥೆ ಬಗ್ಗೆಯೇ ಮಾತನಾಡಿದರು. ಅದ್ಭುತ ಕಥೆ ಬರೆದಿದ್ದಿಯಾ ಎಂದು ನನ್ನನ್ನು ಮುಜುಗರಕ್ಕೆ ಈಡುಮಾಡಿದರು. ಬಹು ನಿರೀಕ್ಷೆಯಿಂದ ಬರೆದ ಕಥೆ ಸಹಕಥೆಗಾರನಿಗೆ ಇಷ್ಟವಾಗಿದ್ದಕ್ಕೆ ಮತ್ತೆ ಕಥೆಗಳನ್ನು ಬರೆಯತೊಡಗಿದೆ. ಮಾಮೂಲಿ ಗಾಂಧಿ, ಡಾಟರ್ ಆಫ್ ದುರುಗವ್ವ ಮೈದಳೆದರು. ಕಳೆದ ಹಲವು ವರ್ಷಗಳಿಂದ ಕಾಡಿದ ವಿಷಯ ವಸ್ತುಗಳನ್ನು ನನ್ನನ್ನು ಬಹುವಾಗಿ ತೊಡಗಿಸಿಕೊಂಡು ಆ ಕಥೆಗಳನ್ನು ಬರೆದು ಮತ್ತೆ ಮತ್ತೆ ಓದಿದೆ. ಈ ಸಂದರ್ಭದಲ್ಲೆ, ಗುಲ್ಬರ್ಗದಿಂದ ಡಾ.ಸ್ವಾಮಿರಾವ್ ಕುಲಕಣರ್ಿಯವರು ಮತ್ತು ಅಪ್ಪಾರಾವ್ ಅಕ್ಕೋಣೆಯವರು ಫೋನ್ ಮಾಡಿ ಕಥೆಗಳನ್ನು ಕಳಿಸೆಂದು ಒತ್ತಾಯಮಾಡಿದರು. ಅವರಿಗೆ ಹೇಳುತ್ತಿದ್ದುದು ಒಂದೇ ಮಾತು, ಸರ್ ಇದು ನನ್ನ ಮೂರನೇ ಕಥಾ ಸಂಕಲನ, ಓದುಗರು ಬಹಳ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಏನೋ ಒಂದು ಬರೆದು ಪ್ರಕಟಿಸುವುದಲ್ಲ. ನನ್ನ ಮಟ್ಟಿಗೆ ಹಿಂದಿನ ಕಥಾ ಸಂಕಲನಗಳಿಗಿಂತಲೂ ಉತ್ತಮವಾಗಿ ಮೂಡಿಬರಬೇಕು. ನಾನಿನ್ನೂ ಕನ್ನಡ ಕಥಾ ಲೋಕದಲ್ಲಿ ಬಹಳಷ್ಟು ಬೆಳೆಯಬೇಕೆಂಬ ಆಸೆ ಇಟ್ಟುಕೊಂಡಿದ್ದೇನೆ. ಉಳಿದ ನನ್ನ ಸಹ ಕಥೆಗಾರರಿಗಿಂತ ಭಿನ್ನ ಕಥೆಗಳನ್ನು ಬರೆದು ನನ್ನದೇ ಆದ ಐಡೆಂಟೆಟಿ ಹೊಂದಬೇಕು... ಎನ್ನುತ್ತಿದ್ದೆ. ಎಂಟು ಕಥೆಗಳನ್ನು ಟೈಪ್ಮಾಡಿ ಮುಗಿಸಿದಾಗ ಅದೆಂಥದೊ ಸಮಾಧಾನ. ಈ ಹಿಂದೆಯೇ ಬರೆದ ಕತ್ತಲು ಮತ್ತು ಆಸರೆ ಎರಡು ಪುಟ್ಟ ಕಥೆಗಳನ್ನು ಸಂಕಲನದಲ್ಲಿ ಸೇರಿಸಿ, ಒಟ್ಟು ಹತ್ತು ಕಥೆಗಳಾಗಲಿ ಎಂದು ಕಳಿಸಿದೆ. ಬೆಳಿಗ್ಗೆ 8ರಿಂದ 12 ರವರೆಗೆ ಕಾಲೇಜಿನಲ್ಲಿ ಪಾಠ, ಮತ್ತೆ 1ರಿಂದ 4ರವರೆಗೆ ಟ್ಯೂಷನ್, ಸಂಜೆ 5ರಿಂದ ಮಧ್ಯರಾತ್ರಿಯವರೆಗೆ ಪತ್ರಿಕೆಯಲ್ಲಿ ಕೆಲಸ ಹೀಗೆ ಸದಾ ಬ್ಯೂಸಿಯಾಗಿದ್ದರೂ ಮೂರನೇ ಕಥಾ ಸಂಕಲನ ಹೊರಬರುತ್ತಿರುವುದು ನನ್ನ ಪರಿಶ್ರಮಕ್ಕೆ ತಕ್ಕ ಬೆಲೆ ಎನಿಸಿದೆ. ಡಿಸೆಂಬರ್ ಚಳಿಯಲ್ಲಿ ನಡುಗುತ್ತಾ ಪ್ರೆಸ್ನಿಂದ ವಿದ್ಯಾಥರ್ಿ ಮಿತ್ರ ಬಸವರಾಜ ಹಳ್ಳಿಯೊಂದಿಗೆ ನಡೆಯುತ್ತಾ ಮಾತನಾಡಿದ್ದು ಬರೀ ಕಥೆಗಳ ಬಗ್ಗೆಯೇ! ಕಳೆದ ಹಲವು ತಿಂಗಳುಗಳಿಂದ ನನ್ನ ರಾತ್ರಿ ಊಟ ಮಧ್ಯರಾತ್ರಿ ಕಳೆದ ಮೇಲೆಯೇ! ಊಟ ಮುಗಿಸುವಾಗ ಒಂದು, ಒಂದೂವರೆ ಗಂಟೆ ಬಾರಿಸುವುದು ಸಾಮಾನ್ಯ. ಒಂದೆರಡು ದಿನ ನಾನು ಮನೆ ತಲುಪಿದಾಗ 4 ಗಂಟೆ ದಾಟಿತ್ತು. ಕೆಲಸ ಮುಗಿಸುವವರೆಗೆೆ ಊಟ ಮಾಡುವ ಜಾಯಮಾನ ನನ್ನದಲ್ಲ. ಮೊದಲ ದಿನ ಹಾಗೆ ಊಟ ಮಾಡದೆ ಮಲಗಿದೆ. ಸಂಗಾತಿ ಊಟ ಮಾಡದ್ದಕ್ಕೆ ಜೀವ ಚುರ್ರೆಂದಿತು. ಮತ್ತೊಂದು ದಿನ ಮನೆ ತಲುಪಿದಾಗ ಬೆಳಗಿನ ಜಾವ .4 ಗಂಟೆ 05 ನಿಮಿಷ. ಜಗತ್ತಿನಲ್ಲಿ ಯಾರಾದರೂ ಊಟ ಮಾಡುತ್ತಿದ್ದರೊ ಆ ಹೊತ್ತಿನಲ್ಲಿ ಗೊತ್ತಿಲ್ಲ. ಆದರೆ ಸಂಗಾತಿ ಉಮಾ ಮತ್ತು ಮುದ್ದು ಮರಿಗಳಾದ ಸಿರಿ ಮತ್ತು ಭೂಮಿ ನನ್ನನ್ನು ಸಹಿಸಿಕೊಂಡಿದ್ದರ ಬಗ್ಗೆ ನನಗೆ ಬಲು ಸೋಜಿಗದ ಸಂಗತಿ. ಆ ದಿನ ಊಟ ಮುಗಿಸಿ, ಮಲಗಿದಾಗ 4.30. ಮತ್ತೆ ಮರುದಿನ ಎಂಟರೊಳಗೆ ಏಳಬೇಕು. ಕಾಲೇಜಿನಲ್ಲಿ ಮೊದಲ ಪಿರಿಯಡ್ಗೆ ಹಾಜರಾಗಬೇಕೆಂಬ ಧಾವಂತ. ಹೀಗೆ ಎಲ್ಲವನ್ನೂ ತೂಗಿಸಿಕೊಂಡು ನಡೆದರೆ ಮಾತ್ರ ನನ್ನ ಬದುಕ ಬಂಡಿ ಸ್ವಲ್ಪ ಬ್ಯಾಲೆನ್ಸ್ನಲ್ಲಿ ಇರುತ್ತದೆ. ಊರು ಬಿಟ್ಟು ಹೋದರೆ ಉತ್ತಮ ಹುದ್ದೆ, ಪಗಾರ ಸಾಧ್ಯವೆಂದೂ ಗೊತ್ತು. ಆದರೆ ಅಂತಹ ಹುದ್ದೆಗಳನ್ನು ತೊರೆದು ಬಂದಿದ್ದೂ ಇತಿಹಾಸ. ಹಲವರು ಭೇಟಿಯಾದಾಗ ಗಾಬರಿಯಿಂದ ಕೇಳಿದ್ದುಂಟು. ಈಗಂತೂ ಹೀಗೆ ಇದ್ದರೆ ಚೆನ್ನಾಗಿ ಅಂತ ಅನ್ನಿಸುತ್ತಿದೆ. ಸಿಂಧನೂರಿನ ಪರಿಸರವೇ ನನ್ನ ಬರವಣಿಗೆ ಮತ್ತು ಬೆಳವಣಿಗೆಗೆ ಸೂಕ್ತ ಜಾಗೆ ಅಂತ ಅನ್ನಿಸಿದೆ. ಹಾಗೆ ನೂಕಿಕೊಂಡು ಹೋಗಬೇಕು ಕೈ, ಕಾಲು ಸೋಲುವ ತನಕ. ಸಿಂಧನೂರು ಎಂಬ ಊರು ಅತ್ತ ಹಳ್ಳಿಯೂ ಅಲ್ಲದ, ಪಟ್ಟಣವೂ ಅಲ್ಲದ ಒಂದು ವಿಚಿತ್ರ ಊರು. ಬೆಂಗಳೂರು ಮತ್ತು ಮುಂಬೈಯ ಬೆಡಗು ಗುಡದೂರು ಮತ್ತು ಹಸಮಕಲ್ ಹಳ್ಳಿಗಳ ಚೈತನ್ಯ, ಪ್ರೀತಿ, ಕಳಕಳಿಯೂ ಸಿಂಧನೂರಿನಲ್ಲಿ ಮೇಳೈಸಿವೆ. ಇಲ್ಲಿಯ ರಾಜಕೀಯ, ಸಾಮಾಜಿಕ, ಆಥರ್ಿಕ ತಲ್ಲಣಗಳು, ಸಂಕಷ್ಟಗಳು, ಬದಲಾವಣೆಗಳು ಜಗತ್ತಿನ ಯಾವುದೇ ಭಾಗದ ತಲ್ಲಣಗಳ ತದ್ರೂಪು. ಹೀಗಿದ್ದಾಗ ಈ ಊರೇ ಸೂಕ್ತ ಎನಿಸಿದ್ದು ನಿಜ. ನವೆಂಬರ್-2008 ರಲ್ಲಿ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಏರ್ಪಡಿಸಿದ್ದ ಹೊಸ ತಲೆಮಾರಿನ ಸಾಹಿತ್ಯದ ಇತ್ತೀಚಿನ ಒಲವುಗಳು ಎಂಬ ವಿಚಾರ ಸಂಕಿರಣ ನನ್ನ ಓರಗೆಯ ಅನೇಕ ಗೆಳೆಯರನ್ನು ಖುದ್ದಾಗಿ ನೋಡುವ ಅವಕಾಶ ಸಿಕ್ಕಿತು. ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲು ಅವಕಾಶ ಸಿಕ್ಕಿದ್ದಕ್ಕೆ ಡಾ.ರಹಮತ್ ತರೀಕೆರೆ ಮತ್ತು ಕ್ರೈಸ್ಟ್ ಕಾಲೇಜಿನ ಗೆಳೆಯ ರಂಗನಾಥ ಕೆ.ಆರ್. ಅವರನ್ನು ನೆನೆಯಬೇಕು. ಎನ್.ಕೆ.ಹನುಮಂತಯ್ಯ, ಮಂಜುನಾಥ ಲತಾ ಅಂಥಹ ಗೆಳೆಯರ ಜೊತೆಗಿನ ಹರಟೆಯೂ ಬಹಳಷ್ಟು ಕಲಿಸಿದೆ. ಊರು ಬಿಟ್ಟು ಹೋಗುವುದೆಂದರೆ ನನಗೆ ಕುತ್ತಿಗೆಗೇ ಬರುತ್ತದೆ. ಸಂಧ್ಯಾ ಸಾಹಿತ್ಯ ವೇದಿಕೆ ವತಿಯಿಂದ ಚಿಕ್ಕಮಂಗಳೂರು ಜಿಲ್ಲೆ ತರೀಕೆರೆಯಲ್ಲಿ ನಡೆದ ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರ ಸ್ವೀಕರಿಸಲು ತೆರಳಿದಾಗ ಅಲ್ಲಿ ಭೇಟಿಯಾದ ರಾಜಶೇಖರ ಕಕ್ಕುಂದಾ, ಮಲ್ಲಿಕಾಜರ್ುನ ಮತ್ತಿತರ ಗೆಳೆಯರ ಸಂಪರ್ಕವನ್ನೂ ಮರೆಯಲಾಗದು. ಅದಕ್ಕೆಲ್ಲಾ ನಾನು ನೋಡಿದ ವ್ಯಕ್ತಿಗಳಲ್ಲೆ ಸೌಜನ್ಯದ ಸಾಕಾರಮೂತರ್ಿಯಂತಿರುವ ಡಾ.ಆನಂದ ಪಾಟೀಲ್ ಮತ್ತು ಬಹು ಚೈತನ್ಯದ ಅಣ್ಣ ರವೀಂದ್ರ ಹಿರೇಮಠ ಅವರ ಪ್ರೀತಿ ಅಲ್ಲಿಗೆ ತೆರಳುವಂತೆ ಮಾಡಿತು. ಬಾಲಕವಯತ್ರಿ ಮುದ್ದು, ಮತ್ತು ಅಲ್ಲಿಯ ಶಾಲಾ ಮಕ್ಕಳೊಂದಿಗೆ ಪ್ರಶಸ್ತಿ ಪುರಸ್ಕೃತ ಆಗಸ್ಟ್ 15 ಕಥೆಯ ಮುಕ್ತ ಸಂವಾದ ಬಹು ಇಷ್ಟವಾಯಿತು. ತರಿಕೇರೆಯ ಮಕ್ಕಳ ಓದುವ ಹವ್ಯಾಸ ಹಿಡಿಸಿತು. ಸದ್ಯ ಬರೆಯುತ್ತಿರುವ ನನ್ನ ಸಹಕಥೆಗಾರರಿಗೆ ಎದುರಾಗಿರುವ ಎಲ್ಲಾ ಸವಾಲುಗಳು ನನ್ನ ಬೆನ್ನು ಬಿಟ್ಟಿಲ್ಲ ಎಂಬುದರಲ್ಲಿ ಎರಡು ಮಾತಿಲ್ಲ. ನೈಜ ಬದುಕಿಗೆ ತೀರಾ ಹತ್ತಿರದಲ್ಲೆ ಬದುಕುವ ನನಗೆ ನಿತ್ಯ ಎರಡ್ಮೂರು ಹೊಸ ಕಥೆಗಳು ಹೊಳೆಯುತ್ತವೆ. ಆದರೆ ಬರೆಯುವಲ್ಲಿ ವಿಫಲನಾಗುತ್ತೇನೆ. ಬರೆದ ಪ್ರತಿ ಕಥೆಯೂ ತನ್ನಷ್ಟಕ್ಕೆ ತಾನು ಹಿಂದಿನ ಕಥೆಗಳಿಗಿಂತ ಉತ್ತಮ ಎಂದೇ ಹೇಳಿಕೊಳ್ಳುವುದುಂಟು. ಮತ್ತೊಂದು ಕಥೆ ಬರೆದಾಗ ಹೀಗೆಯೇ ಆಗುವುದು. ಮಾಮೂಲಿ ಗಾಂಧಿ ಸಂಕಲನದ ಕನ್ನಡಿಯೊಳಗಿನ ಚಿತ್ರಗಳು, ಎರಡು ಪಾರಿವಾಳಗಳು, ಮಾಮೂಲಿ ಗಾಂಧಿ, ದೊಡ್ಡವರ ನಾಯಿ ಮತ್ತೆ ಮತ್ತೆ ಓದಬೇಕೆಂದು ನನ್ನನ್ನು ಒತ್ತಾಯಿಸುತ್ತವೆ. ನೋಡು ನಮ್ಮ ಕಥೆಗಾರ ಹೇಗೆ ಬರೆದಿದ್ದಾನೆ ಎಂದು ನನ್ನನ್ನೇ ಹೀಯಾಳಿಸುವಂತೆ ತೋರುತ್ತವೆ. ಏನು ಮಾಡುವುದು ಹೀಗೆ ಪ್ರಶ್ನಿಸುವ ಕಥೆಗಳ ಮುಂದೆ ನಾನು ಅಸಹಾಯಕ. ಈ ಬಾರಿ ಕಥೆಗಳನ್ನು ಬರೆಯುವುದರಲ್ಲಿ ಶ್ರಮ ಕಡಿಮೆ. ಕಥೆಗಳು ತಮ್ಮಷ್ಟಕ್ಕೆ ತಾವು ಅರಳಿ ನಿಂತಿವೆ. ಕನಸಿನಲ್ಲಿ ಮಳೆ ನಿಂತ ಕ್ಷಣದಲ್ಲಿ ಆಗಸದಲ್ಲಿ ಮೂಡಿದ ಬಣ್ಣದಬಿಲ್ಲಿನಂತೆ, ಹುಲ್ಲಿನ ತುದಿ ಮೇಲೆ ಕುಳಿತು ಸಂಭ್ರಮಿಸುವ ಮುತ್ತಿನ ಹನಿಯಂತೆ ಸಹಜವಾಗಿಯೇ ಮೂಡಿಬಂದಿವೆ. ಇಷ್ಟೆಲ್ಲಾ ಒತ್ತಡದ ಮಧ್ಯೆ ಕಥೆ ಬರೆಯುವುದು ನಿನಗೆ ಕಷ್ಟವಾಗುತ್ತಿರಬೇಕು. ಕಥೆಗಳನ್ನು ಬರೆಯುವುದನ್ನು ನಿಲ್ಲಿಸಬೇಡ. ರಾಜ್ಯ ಮಟ್ಟದಲ್ಲಿ ಗುರುತಿಸುವ ಹೆಸರಿದೆ... ಹೀಗೆ ನನಗೆ ಈ ಸಲ ಬುದ್ಧಿವಾದ ಮತ್ತು ಹೊಗಳುವ ಜಾಯಮಾನದವರಿಗೆ ಸ್ವಲ್ಪ ನಿರಾಶೆ ಉಂಟಾಗುತ್ತಿದೆ. ಅಂಥವರು ಗಾಬರಿಯಾಗುವಂತೆ ನನ್ನ ಪಾಡಿಗೆ ನಾನು ನನ್ನದೇ ಕಥಾಲೋಕದಲ್ಲೆ ವಿಹರಿಸಿದ್ದೇನೆ. ನಿರಾಯಾಸವಾಗಿ ಸಿಕ್ಕ ಕಥೆಗಳ ಎಳೆಗಳನ್ನು ಬಲು ನಯ ನಾಜೂಕಿನಿಂದ ಕಥೆಗಳನ್ನು ಹೆಣೆದು ನಿಮ್ಮ ಕೈಗೆ ಕೊಟ್ಟಿರುವೆ. ತೀಮರ್ಾನ ಈಗ ನಿಮ್ಮದೆ. 1997ರಲ್ಲಿ ಪ್ರಜಾವಾಣಿ ದೀಪಾವಳಿ ಕಥಾ ಸ್ಪಧರ್ೆಯಲ್ಲಿ ಪ್ರಥಮ ಬಹುಮಾನ ಪಡೆದ ನನ್ನ ಕಥೆ ಉಡಿಯಲ್ಲಿಯ ಉರಿ ಓದಿದ ಹಿರಿಯ ಕಥೆಗಾರ ಎಸ್.ದಿವಾಕರ ಅವರು ಚೆನ್ನೈನಿಂದ ಆಗ ನನಗೆ ಕಂಪ್ಯೂಟರ್ನಲ್ಲಿ ಟೈಪ್ಮಾಡಿದ ನನ್ನ ಹೆಸರಿರುವ ಪತ್ರ ಬಂದಾಗ ನನಗಂತೂ ಭಾರಿ ಸಂತೋಷವಾಗಿತ್ತು. ಅವರು ಪತ್ರದಲ್ಲಿ, ನಿಮ್ಮ ಭಾಗದ ಕಥೆಗಾರರು ಒಂದೇ ತೆರನಾದ ಭಾಷೆ ಬಳಸುತ್ತಿರುವುದರ ಬಗ್ಗೆ ನನ್ನ ಆಕ್ಷೇಪವಿದೆ. ನಿನ್ನಲ್ಲಿ ಉಳಿದವರಿಗಿಂತ ಭಿನ್ನವಾದ ವಿಷಯ ವಸ್ತುಗಳಿವೆ. ನಿರೂಪಣೆ ಮತ್ತು ಸಂಭಾಷಣೆಗೆಳೆರಡನ್ನೂ ಲೋಕಲ್ ಭಾಷೆಯನ್ನೆ ಬಳಸುವುದಕ್ಕಿಂತ ಭಿನ್ನವಾಗಿ ಯೋಚಿಸು ಅಂದು ನೀಡಿದ ಸಲಹೆಗೆ ಮೂರನೇ ಕಥಾ ಸಂಕಲನದಲ್ಲಿ ಪ್ರಯೋಗಮಾಡಿದ್ದೇನೆ. ಹಾಗಾಗಿ ದಿವಾಕರ್ ಸರ್ ಮಾತನ್ನು ವಿಳಂಬವಾದರೂ ಸರಿಯೆನಿಸಿ ಪಾಲಿಸಿದ್ದೇನೆ. ಕಥನ ಕಲೆಯಲ್ಲಿ ಹೊಸು ಜಾಡು ಹಿಡಿಯಲು ಅವರೂ ಕಾರಣರಾಗಿದ್ದಾರೆ. ಒಂದು ದಿನ ವಿ.ಎಂ. ಮಂಜುನಾಥ ಫೋನ್ಮಾಡಿ ನನ್ನನ್ನು ಭಾರಿ ತಬ್ಬಿಬ್ಬುಗೊಳಿಸಿಬಿಟ್ಟ. ಮತಾಂತರ ಕಥಾ ಸಂಕಲನವನ್ನು ಕ್ರಿಯಾಶೀಲ ಸಿನಿಮಾ ನಿದರ್ೇಶಕ ಗಿರೀಶ ಕಾಸರವಳ್ಳಿ ಅವರಿಗೆ ಕೊಟ್ಟಿದ್ದೇನೆ. ಅವರು ಹೈ.ಕ. ಭಾಗದ ಕಥೆಯನ್ನಾಧರಿಸಿ ಒಂದು ಸಿನಿಮಾ ಮಾಡಬೇಕೆಂದಿರುವೆ ಎಂದಿದ್ದಾರೆ. ಆ ಕಥಾ ಸಂಕಲನದ ಅವ್ವ, ಈ ದಾಹ ದೊಡ್ಡದು ಮತ್ತು ಮತಾಂತರ ಕಥೆಗಳು ಸಿನಿಮಾ ಮಾಡಲು ಉತ್ತಮ ವಸ್ತುಗಳಾಗಿವೆ ಎಂದು ಹೇಳಿದ್ದೇನೆ. ಅಮರೇಶ ನುಗಡೋಣಿಯವರ ಸವಾರಿ ಕಥೆ ಓದುತ್ತಿರುವೆ. ನಿನ್ನ ಕಥೆಗಳನ್ನೂ ಪರಿಗಣಿಸುವುದಾಗಿ ಕಾಸರವಳ್ಳಿ ತಿಳಿಸಿದ್ದಾರೆ ಎಂದಾಗ ನನ್ನ ಮೊಬೈಲ್ಗೆ ಆ ದಿನ ಬಂದ ಕರೆ ನಿಜಕ್ಕೂ ನನ್ನನ್ನು ಬಹು ಪರೇಶಾನ್ ಮಾಡಿತ್ತು. ಆಗಲೇ ಹೇಳಿದೆನಲ್ಲ. ನಾನಾಗಿ ಯಾರ ಮುಂದೆ ಕೈಕಟ್ಟಿ, ಕೈಮುಗಿದು ಬೇಡುವುದು ಎಂದರೆ, ಹೋಗಲಿ, ಯಾರನ್ನೋ ಪ್ಲೀಸ್ ಮಾಡುವುದು ಎಂದರೂ ನನಗೆ ಆಗದ ಮಾತು. ಬಾಲಕನಾಗಿದ್ದಾಗಿನಿಂದಲೇ ಒಂದು ತೆರನಾದ ಅಡಾಮೆಂಟ್ ನೇಚರ್ ಮೈಗೂಡಿಸಿಕೊಂಡಿರುವೆ. ನನಗೆ ಯಪ್ಪಾ ಯಣ್ಣಾ, ಯಕ್ಕಾ... ಎನ್ನುತ್ತಾ ಸಣ್ಣದಿರಲಿ, ದೊಡ್ಡದಿರಲಿ, ನನ್ನ ವೈಯಕ್ತಿಕ ಬದುಕು, ಗೌರವ, ಹೆಗ್ಗಳಿಕೆಗೆ ಕಾರಣರಾದರೂ ಡೊಗ್ಗು ಸಲಾಮುಹೊಡೆಯಲು ಮನಸ್ಸಾಗುವುದಿಲ್ಲ. ಕೆಲಸ ಕೆಟ್ಟರೂ ಚಿಂತೆಯಿಲ್ಲ. ಮುಂದಾದರೂ ಎಲ್ಲವೂ ಸರಿಯಾಗುತ್ತೆ ಎಂದೇ ಭಾವಿಸಿ ಸುಮ್ಮನಿದ್ದುಬಿಡುತ್ತೇನೆ. ಆ ನನ್ನ ಮೌನ, ಹಟಮಾರಿತನ ಹಾಗೂ ರಾಜಿಮಾಡಿಕೊಳ್ಳದ ಮನೋಭಾವವೇ ಮೂರನೇ ಸಂಕಲನದ ಕಥೆಗಳಾಗಿ ರೂಪು ತಳೆದಿರುವುದು. ನೇರವಾಗಿ ಹೊಸ ಆಶಯಗಳೊಂದಿಗೆ ಕಥೆಗಳನ್ನು ಬರೆದು ನಿಮ್ಮ ಅಂಗೈ ಅರಗಿಣಿಯಂತೆ ಕೊಟ್ಟಿರುವೆ. ನಿಮಗೆ ಇಷ್ಟವಾದರೂ ಇಷ್ಟವಾಗದಿದ್ದರೂ ನಾನಂತೂ ಸ್ವೀಕರಿಸುತ್ತೇನೆ. ನನಗೆ ಎರಡೂ ಅಷ್ಟೆ. ನಾನು ಬರೆಹ ಇಷ್ಟಕ್ಕೆ ನಿಲ್ಲುವುದಿಲ್ಲವಲ್ಲ. ಇನ್ನೂ ನೂರಾರು ಕಥೆಗಳು, ಕೆಲವು ಕಾದಂಬರಿಗಳು ನನ್ನ ಮನಸ್ಸು, ಹೃದಯ ಮತ್ತು ಕೈಬೆರಳ ತುದಿಗಳಲ್ಲಿವೆ. ಕಳೆದ ಕೆಲವು ವರ್ಷಗಳಿಂದೀಚೆಗೆ ಪೆನ್ನು, ಹಾಳೆ ಹಿಡಿದು ಬರೆಯುವುದು ಇಲ್ಲವಾಗಿದೆ. ಏನೇ ಬರೆಯುವುದಿದ್ದರೆ ಕಂಪ್ಯೂಟರ್ ಮುಂದೆ ಕುಳಿತು ಕೀಬೋಡರ್್ನಲ್ಲಿ ಬೆರಳ ತುದಿ ಆಡಿಸಬೇಕು. ಬೇಕೆನಿಸಿದ್ದನ್ನು ಹಾಗೆ ಉಳಿಸಿ, ಬೇಡವಾದದ್ದನ್ನು ಮೌಸ್ನಿಂದ ಸೆಲೆಕ್ಟ್ಮಾಡಿ ಡಿಲೀಟ್ಮಾಡಬೇಕು. ನಿಮ್ಮ ಸಹಕಾರವಿದ್ದರೆ ಅವುಗಳೂ ಮುಂಬರುವ ವರ್ಷಗಳಲ್ಲಿ ಪ್ರಕಟಗೊಳ್ಳಲಿವೆ. ಉಡಿಯಲ್ಲಿಯ ಉರಿ ಕಥಾ ಸಂಕಲನಕ್ಕೆ ಕಲಾವಿದ ಕೆ.ಕೆ.ಮಕಾಳಿ ಮುಖಪುಟ ಚಿತ್ರ ಬರೆದರೆ, ಎರಡನೇ ಕಥಾ ಸಂಕಲನ ಮತಾಂತರಕ್ಕೆ ಗೆಳೆಯ ವಿ.ಎಂ.ಮಂಜುನಾಥ ನನ್ನ ಕಥೆಗಳ ಅರ್ಥವನ್ನು ಅಂಕುಡೊಂಕು ಗೆರೆಗಳಲ್ಲಿ ಹಿಡಿದಿಟ್ಟಿದ್ದ. ಮೂರನೇ ಕಥಾ ಸಂಕಲನ ಮಾಮೂಲಿ ಗಾಂಧಿ ಸಂಕಲನ ಆದಷ್ಟು ಮಾಮೂಲಾಗಿ (ಸಿಂಪಲ್) ಬರಲಿ ಎಂದೇ ಬಯಸಿದೆ. ಈ ಸಲ ಕವರ್ ಪೇಜ್ ನಾನೇ ತಯಾರುಮಾಡಬೇಕೆಂದು ಪ್ರಯತ್ನಿಸಿದೆ. ಸೂಕ್ತ ಚಿತ್ರ ಆಯ್ಕೆಯಲ್ಲಿ ಬಸವರಾಜ ಹಳ್ಳಿ ಸಹಕರಿಸಿದ. ಸರಳ ಮುಖಪುಟ, ಬೂದು ಬಣ್ಣದ ರ್ಯಾಪರ್ನೊಂದಿಗೆ ಹೊರಬರುತ್ತಿರುವ ಕಥಾ ಸಂಕಲನದ ಬಗ್ಗೆ ನಾನು ಅಪಾರ ವಿಶ್ವಾಸವಿಟ್ಟುಕೊಂಡಿದ್ದೇನೆ. ಹಿಂಬದಿ ಪುಟದ ಚಿತ್ರ ಸಿಂಧನೂರಿನ ಪ್ರತಿಭಾವಂತ ಫೋಟೊಗ್ರಾಫರ್ ಗೆಳೆಯ ಪ್ರಹ್ಲಾದ ತೆಗೆದಿದ್ದು. ಕಳೆದ ಒಂದೂವರೆ ವರ್ಷ ನನ್ನ ಜೊತೆಗಿದ್ದು ಅಪಾರ ಪ್ರೀತಿ ಹಂಚಿಕೊಂಡು ನನ್ನಿಂದ ದೂರವಾಗಲ್ಲ ಎಂದೇ ಕೈಮೇಲೆ ಕೈಹಾಕಿ ಆಣೆ ಮಾಡಿದ ಜೀವದ ಗೆಳತಿ ಶಿವಲೀಲಾ ಭೌತಿಕವಾಗಿ ಇಲ್ಲವಲ್ಲ ಎಂಬುದೇ ನನಗೆ ಭಾರಿ ಅಸಮಾಧಾನ. ಎಲ್ಲ ವೈರುಧ್ಯಗಳ ಮಧ್ಯೆ ಆಕೆಯ ಮಾನಸಿಕ ಕಾಯಿಲೆ ಗುಣಮಾಡಲು, ಅಂತಹ ಜೀವ ಇನ್ನೂ ಬದುಕಲಿ ಎಂದೇ ಎಲ್ಲರಿಗಿಂತಲೂ ಅತಿಯಾಗಿ ಪ್ರೀತಿಸಿದೆ. ಥೇಟ್ ಮಗುವಿನಂತೆಯೇ ಆರೈಕೆಮಾಡಿದೆ. ಹಿರಿಯರ ಮತ್ತು ವೈದ್ಯರ ಸಲಹೆಯಂತೆ ಆಕೆಯ ಕೈಹಿಡಿದೆ. ಏನೆಲ್ಲ ಕನಸುಗಳನ್ನು ಕಟ್ಟಿದೆ. ಕಟ್ಟಿದ ಕನಸುಗಳನ್ನೆಲ್ಲಾ ಈಡೇರಿಸುವುದಾಗಿ ಅದೆಷ್ಟು ಜೀವಂತಿಕೆಯಿಂದ ಹೇಳುತ್ತಿದ್ದಾಕೆ ಒಂದು ದಿನ ಇದ್ದಕ್ಕಿದ್ದಂತೆ ನನ್ನ ಪ್ರೀತಿ ಮತ್ತು ತನ್ನ ತಾಯಿ ಈರಮ್ಮಕ್ಕನ ಅದಮ್ಯ ಪ್ರೀತಿಯನ್ನೂ ಧಿಕ್ಕರಿಸಿ ಹೋಗಿಬಿಟ್ಟಳು. ಪ್ರತಿಕ್ಷಣವೂ ಕಾಡುವ ಆ ಜೀವದ ಕೋತಿ, ನಾಯಿ ಮರಿ, ಪುಟ್ಟ ಪಾರಿವಾಳದಂತಾ ನನ್ನ ಶಿವುಗೆ ಮೂರನೇ ಕಥಾ ಸಂಕಲನ ಅಪರ್ಿಸುತ್ತಿದ್ದೇನೆ. ಮನಸ್ಸಿಗೊಂದಿಷ್ಟು ನಿರಾಳತೆ ಮೂಡೀತು ಎಂಬ ಬಯಕೆ ನನ್ನದು. ಕೃತಿಯ ರೂಪದಲ್ಲಿ ಆ ಕೋಡಿ ಎಂದಿಗೂ ನನ್ನ ಜೊತೆಗಿರಲಿ. ನನ್ನ ಬದುಕು ಹಲವು ವೈರುಧ್ಯಗಳಿಗೆ ಸಾಕ್ಷಿಯಾದರೂ ತಾಯಿಯಂತೆಯೇ ಎಲ್ಲವನ್ನೂ ಹೊಟ್ಟೆಯಲ್ಲಿ ಹಾಕಿಕೊಂಡು ತನ್ನ ಮೂರನೇ ಮಗುವೆಂಬಂತೆ ಸಲುಹುವ ಸಂಗಾತಿ ಉಮಾ, ಬಲು ಕಿರಿಕಿರಿಯ ಸಿರಿ, ಬುಸುಗುಡುವ ಭೂಮಿ ಎಂಬ ಜೀವದ ತುಣುಕುಗಳ ಜೊತೆಗೆ ಸಹೋದರಿ ಯಶೋಧಾ ಸೊರಟೂರು ಪ್ರೀತಿಯಿಲ್ಲದಿದ್ದರೆ ಈ ಕಥಾ ಸಂಕಲನ ಎಲ್ಲಿ ಬರುತ್ತಿತ್ತು? ಏಳೆಂಟು ತಿಂಗಳು ಊರಿಗೆ ಹೋಗದೆ ಇದ್ದು ನನ್ನನ್ನು ಬಹುವಾಗಿ ಹಿಂಸಿಸಿಕೊಂಡಿದ್ದೇನೆ. ಮೊನ್ನೆಯಷ್ಟೆ ಹೋಗಿ ಅಪ್ಪ, ಅವ್ವ, ಅಕ್ಕ, ತಮ್ಮಂದಿರು, ಸುವ್ವಿ, ಚೆನ್ನ, ಆಕಳುಗಳನ್ನೂ ಕಣ್ತುಂಬಿಕೊಂಡು ಬಂದೆ. ಗುಡದೂರು, ಜನ, ದಾರಿ, ಮನೆಗಳು, ಗಿಡ, ಗಂಟೆ, ಹೊಲ ಪ್ರತಿಸಂಗತಿಯೂ ನನಗೆ ಅಚ್ಚುಮೆಚ್ಚು. ಕಳೆದ ಹದಿನೈದು ವರ್ಷಗಳಿಂದಲೂ ನನ್ನಲ್ಲಿರುವ ಕಥೆಗಾರನನ್ನು ಸದಾ ಜಾಗೃತಿ ಸ್ಥಿತಿಯಲ್ಲಿರಿಸಿದ ಹಿರಿಯರಾದ ಅಮರೇಶ ಕುಂಬಾರ, ಚಿತ್ರಶೇಖರ ಕಂಠಿ, ಆಶಾ ಕಂಠಿ, ಕುಂ.ವೀರಭದ್ರಪ್ಪ, ಮಲ್ಲಿಕಾಜರ್ುನ ಹಿರೇಮಠ, ಸಿ.ಚನ್ನಬಸವಣ್ಣ, ರಾಘವೇಂದ್ರ ಪಾಟೀಲ್, ಎಸ್.ದಿವಾಕರ, ಅಬ್ದುಲ್ ರಶೀದ್, ವಿವೇಕ ಶಾನಭಾಗ, ರಹಮತ್ ತರಿಕೆರೆ, ಅಮರೇಶ ನುಗಡೋಣಿ, ಮೊಗಳ್ಳಿ ಗಣೇಶ, ಡಾ.ಬಿ.ಎಂ.ಪುಟ್ಟಯ್ಯ, ಜಿ.ಎನ್.ಮೋಹನ್, ಗೌರಿ ಲಂಕೇಶ, ರವೀಂದ್ರ ರೇಷ್ಮೆ, ಆನಂದ ಪಾಟೀಲ್, ಎಂ.ಎಸ್.ಹಿರೇಮಠ, ಜಾತಿ ವಿನಾಶ ವೇದಿಕೆಯ ಲಕ್ಷ್ಮಣ, ಸರ್ ಎಂಬ ನೈಜ ಹೋರಾಟಗಾರ, ಬಸವರಾಜ ಸಾದರ, ವೆಂಕಟಲಕ್ಷ್ಮೀ, ಸುನಂದಾ ಪ್ರಕಾಶ ಕಡಮೆ, ಬಸು ಬೇವಿನಗಿಡದ, ಲಕ್ಷ್ಮಣ ಕೊಡಸೆ, ಗುಡಿಹಳ್ಳಿ ನಾಗರಾಜ, ಜೋಗಿ, ಎಚ್.ಪಂಪಯ್ಯಶೆಟ್ಟಿ, ಜಂಬಣ್ಣ ಅಮರಚಿಂತ, ಮಹಾಂತೇಶ ಮಸ್ಕಿ, ಬಸವರಾಜ ಸೂಳಿಬಾವಿ, ಕನ್ನಾಡಿಗಾ ನಾರಾಯಣ, ರಾಜಶೇಖರ ಹತಗುಂದಿ ಇನ್ನೂ ಹಲವರು. ಸಹಲೇಖಕರು ಹಾಗು ನನ್ನ ಬಗ್ಗೆ ಅಪಾರ ಪ್ರೀತಿಯಿಟ್ಟಿರುವ ಚಂದ್ರು ತುರುವೀಹಾಳ, ಚಿದಾನಂದ ಸಾಲಿ, ವಿ.ಎಂ.ಮಂಜುನಾಥ, ಸಿ.ಮಂಜುನಾಥ, ಆನಂದ ಋಗ್ವೇದಿ, ಅರುಣ ಜೋಳದ ಕೂಡ್ಲಿಗಿ, ಪೀರಭಾಷಾ, ಆರೀಫ್ ರಾಜಾ, ರಘುನಾಥ ಚ.ಹ., ಸಂದೀಪ ನಾಯಕ, ಡಿ.ಎಸ್.ರಾಮಸ್ವಾಮಿ, ದತ್ತು ಇಕ್ಕಳಕಿ, ದೇವರಾಜ ಬಪ್ಪೂರು, ದೇವು ಪತ್ತಾರ, ದಸ್ತಗೀರಸಾಬ ದಿನ್ನಿ, ಗೋವಿಂದರಾಜ ಬಾರಿಕೇರ, ಹಾಲ್ಕುರಿಕೆ ಶಂಕರ್, ಬಸವರಾಜ ಹವಾಲ್ದಾರ, ಜಹಾಂಗೀರ, ಮಲ್ಲಿಕಾಜರ್ುನಗೌಡ ತೂಲಹಳ್ಳಿ, ಕೆ.ಕರಿಸ್ವಾಮಿ, ಖಾಜಾವಲಿ ಈಚನಾಳ, ಲಕ್ಷ್ಮಣ ಬಾದಾಮಿ, ಕಂಡಕ್ಟರ್ ಸೋಮು, ವಿ.ಆರ್.ಕಾಪರ್ೆಂಟರ್, ಮಹಾಂತೇಶ ನವಲಕಲ್, ಮಂಜುನಾಥ ಲತಾ, ಮುದ್ದು ತೀರ್ಥಹಳ್ಳಿ, ನಾಗಣ್ಣ ಕಿಲಾರಿ, ನರಸಪ್ಪ ಕಂಡಕ್ಟರ್, ಹಾಜಿಸಾಬ್, ನರಸಿಂಹಪ್ಪ, ಕೆ.ಆರ್.ರಂಗನಾಥ, ರಂಗನಾಥ ಟಿ.ವಿ.ನೈನ್, ರವಿ ಹಿರೇಮಠ ಶಹಾಪುರ, ಸಜರ್ಾಶಂಕರ ಅರಳಿಮಠ, ಸತೀಶ ಚಪ್ಪರಿಕೆ, ಶಶಿ ಸಂಪಳ್ಳಿ, ವಿದ್ಯಾರಶ್ಮಿ, ಶ್ರೀಕಲಾ, ವಸುಧೇಂದ್ರ, ಟಿ.ಎಸ್.ಗೊರವರ, ವಿಜಯ ಪಾಟೀಲ್, ಕಂಡಕ್ಟರ್ ಸೋಮು ಹೀಗೆ ರಾಯಚೂರು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಗೆಳೆಯರು ನನಗೆ ಸದಾ ಕಥೆ ಬರೆಯಲು ಪ್ರೇರಣೆ ನೀಡುತ್ತಾರ. ಎಲ್ಲರದೂ ಒಂದೇ ಆಸೆ, ಕಾದಂಬರಿಯೊಂದನ್ನು ಬರೆ. ಆದರೆ ಅದಕ್ಕಾಗಿ ಬೇಕಾದ ಸಮಯ, ತನ್ಮಯತೆ ಸದ್ಯ ಸಿಕ್ಕಿಲ್ಲ ಅಷ್ಟೆ. ಮೂರನೇ ಕಥಾ ಸಂಕಲನ ಮಾಮೂಲಿ ಗಾಂಧಿ ಹೊರತರುತ್ತಿರುವ ಹಿರಿಯರಾದ ಡಾ.ಸ್ವಾಮಿರಾವ್ ಕುಲಕಣರ್ಿ ಮತ್ತು ಅಪ್ಪಾರಾವ್ ಅಕ್ಕೋಣೆ ಅವರಿಗೆ ಬಹು ಕೃತಜ್ಞನಾಗಿದ್ದೇನೆ. ಅಂಗೈಯಲ್ಲಿ ಪುಟ್ಟ ಜೀವದ ಚೂರೆಂಬಂತೆ ಹಿಡಿದ ನಿಮ್ಮನ್ನು ನೆನೆಯುತ್ತಲೇ ಇರುತ್ತೇನೆ.
ತಮ್ಮವನೇ ಕಲಿಗಣನಾಥ ಗುಡದೂರು
ಕಲಿಗಣನಾಥ ಗುಡದೂರುಇಂಗ್ಲಿಷ್ ಉಪನ್ಯಾಸಕಸಂಕೇತ ಕಾಲೇಜ್ಸಿಂಧನೂರು -584128ಜಿಲ್ಲೆ: ರಾಯಚೂರುಮೊ: 9916051329