ಸೋಮವಾರ, ಮಾರ್ಚ್ 16, 2009

ಪವಿತ್ರ ಪುಟ್ಟ ಪಾದಗಳ ಕಣ್ಣಿಗೊತ್ತಿಕೊಂಡು...


ಜಗತ್ತಿನ ಅತ್ಯಂತ ಪವಿತ್ರವಾದ ವಸ್ತು ಯಾವುದು? ಹೀಗೆ ಪ್ರಶ್ನಿಸಿಕೊಂಡಾಗ ಅನ್ನಿಸಿದ್ದು, ಹಸುಕಂದಮ್ಮಗಳ ಬೆಣ್ಣೆ ಮೆದುವಿನ ಪುಟ್ಟ ಪಾದಗಳೇ ಅತ್ಯಂತ ಪವಿತ್ರ. ಇಬ್ಬನಿ ತಣ್ಣನೆಯ ಕಂದಮ್ಮಗಳ ಪುಟ್ಟ ಪಾದಗಳೆಂದರೆ ನನಗೆ ಎಲ್ಲಿಲ್ಲದ ಪ್ರೀತಿ. ಅವುಗಳನ್ನು ನೋಡುತ್ತಾ ಹಲವು ಬಾರಿ ನನ್ನನ್ನು ನಾನು ಮರೆಯುವುದುಂಟು. ಅದೆಷ್ಟು ಸುಂದರವೊ ಈ ಪುಟ್ಟ ಪಾದಗಳು. ಕಣ್ಣ ಕಿರಣ, ಇನಿದನಿ, ತಂಗಾಳಿ, ತಿಳಿಗೊಳ ಎಲ್ಲಕ್ಕೂ ಮಿಗಿಲಾದ ನವಿರು ಈ ಪುಟ್ಟ ಪಾದಗಳಲಿ. ಇಂತಹ ಪುಟ್ಟ ಪಾದಗಳಿಗೆ ಹಣೆ ಹಚ್ಚುವುದೆಂದರೆ ಎಲ್ಲಿಲ್ಲದ ಖುಷಿ, ಸಂಭ್ರಮ, ಹಬ್ಬ, ಜಾತ್ರೆ ಮನದರಮನೆಯಲ್ಲಿ. ಕಣ್ಣಿಗೊತ್ತಿಕೊಂಡರೆ ಬೇಕಿಲ್ಲ ಹಾಡು, ಬರೆಹ, ಓದು, ಊಟ, ನಿದ್ದೆ ಇನ್ನೂ ಏನೇನೊ ಆ ಕ್ಷಣದಲ್ಲಿ. ಇಂಥಹ ಪುಟ್ಟ ಪಾದಗಳಿಗೆ ಹಣೆ ಹಚ್ಚಿದಾಗ, ಕಣ್ಣೊತ್ತಿದಾಗ ಭಕ್ತಿಯೊ, ಪ್ರೀತಿಯೊ ಅದೇನೊ ಒಂಥರ ಮೈಯಲ್ಲಿ ಪ್ರವಾಹ ಶುರು. ನನಗೆ ತಂದೆ-ತಾಯಿ ಹಾಗೂ ತೀರಾ ಒಂದಿಬ್ಬರ ಪಾದಗಳಿಗೆ ನಮಿಸುವುದು ಬಿಟ್ಟರೆ, ಸ್ವಾಮಿಗಳು, ಜಗದ್ಗುರು, ಬಾಬಾ, ತಾವೇ ದೊಡ್ಡೋರು ಎಂದು ಕರೆದುಕೊಳ್ಳೋರು, ದೇವರು, ಫೋಟೊಗಳು, ಕಲ್ಲು, ಕಟ್ಟಿಗೆ ಮೂತರ್ಿಗಳ ಪಾದಗಳನ್ನು ಕೈಯಿಂದ ಮುಟ್ಟಲೂ ಬಹು ಬೇಜಾರು, ಥೇಟ್ 'ಅದೇನೋ' ಮುಟ್ಟಿದಂತೆ ಕೈ ತನ್ನಷ್ಟಕ್ಕೆ ತಾನೆ ಹಿಂದಕ್ಕೆ ಸರಿಯುತ್ತದೆ. ಎಂತೆಂಥ ಅನರ್ಹ ವ್ಯಕ್ತಿಗಳ ಪಾದಗಳನ್ನು ಮುಟ್ಟಿ ಸಂಭ್ರಮಿಸುವ ಜನರನ್ನು ನೋಡಿದಾಗ ಅಯ್ಯೊ ಎನಿಸುತ್ತದೆ. ಹೋಗಿ ನಿಮ್ಮ ಮನೆಯ ಪುಟ್ಟ ಕಂದಮ್ಮಗಳ ಪಾದಗಳನ್ನಾದರೂ ಮುಟ್ಟಿ ಆನಂದಿಸಿ, ಕಣ್ಣಿಗೊತ್ತಿಕೊಳ್ಳಿ ನೀವು ಹಾಗೆ ಯಾರ್ಯಾರದೊ ಕಾಲುಗಳನ್ನು ಯಾವುದ್ಯಾವುದೊ ಕಾರಣಗಳಿಂದ ಹಿಡಿದ ಪಾಪಕ್ಕೆ ಪರಿಹಾರ ದೊರಕೀತು. ಹಾಗೆ ಪಾದಗಳನ್ನು ಮುಟ್ಟಿಸಿಕೊಳ್ಳುವವರೂ ಮಕ್ಕಳಂತೆಯೇ ಇರಬೇಕು. ಯಾವುದೇ ಬಣ್ಣ, ಜಾತಿ, ಧರ್ಮ, ಭಾಷೆ, ಪ್ರಾಂತ, ದೇಶ, ಓದು, ಪ್ರಶಸ್ತಿ, ಪುರಸ್ಕಾರಗಳ ಹಿರಿಮೆ, ಗರಿಮೆ ಹೆಗ್ಗಳಿಕೆಗಳ ಹಂಗಿನಿಂದ ಮಲಿನವಾಗಿರಬಾರದು. ಹೀಗಿರುವ ದೊಡ್ಡವರು ಸುತ್ತಮುತ್ತಲಿನ ಪರಿಸರದಲ್ಲಿ ಸಿಗುವುದೇ ಇಲ್ಲ ಬಿಡಿ. ಹುಡುಕುವುದೂ ವ್ಯರ್ಥ ಪ್ರಯತ್ನ. ಗೌರವಿಸುವುದು ಸಂಪ್ರದಾಯ. ಆದರೆ ಡೊಗ್ಗಿ ಸಲಾಮು ಹಾಕುವುದು ಕೇವಲ ಗುಲಾಮಿತನ. ಸೌಜನ್ಯ ಮಾತು, ನಡವಳಿಕೆ ತಪ್ಪಲ್ಲ; ಅದೇ ಮುಖವಾಡ ಧರಿಸುವುದು ತಪ್ಪು. ನಮಸ್ಕರಿಸಿಕೊಳ್ಳುವವನಿಗೆ ಮೊದಲ ಅರ್ಹತೆ, ನಮಸ್ಕರಿಸಿದವನಿಗೂ ಅಂಥದೇ ಗೌರವ ತೋರಬೇಕೆನ್ನುವುದು. ವ್ಯಕ್ತಿಗಳಲ್ಲೆ ದೊಡ್ಡೋನು, ಸಣ್ಣೋನು ಎಂಬುದಿಲ್ಲ. ಅದೇ ತಾನೆ ಹುಟ್ಟಿದ ಶಿಶು ಮತ್ತು ಇನ್ನೇನು ಕೊನೆಯ ಬಿಕ್ಕು ಕಾಣಿಸಿಕೊಂಡ ವ್ಯಕ್ತಿಯನ್ನೂ ವೈಜ್ಞಾನಿಕವಾಗಿ 'ಹೋಮೋ ಸೆಪಿಯನ್ಸ್' ಎಂಬ ಹೆಸರಿನಲ್ಲೆ ಕರೆಯುವುದು. ಹೀಗಿದ್ದಾಗ ಮತ್ತೆಲ್ಲಿಂದ ಬಂತು ಈ ಏಣಿಶ್ರೇಣಿ? ವ್ಯಕ್ತಿ ಸಮಾಜದಲ್ಲಿ ಉನ್ನತ ಸ್ಥಾನ ಮಾನ ಹೊಂದಿರಬಹುದು ಅವನಿಗೆ ಪಾದಮುಟ್ಟಿಯೇ ನಮಸ್ಕರಿಸಿಯೇ ಗೌರವ ತೋರಿಸಬೇಕೆಂದೇನಿಲ್ಲ. ಸೌಜನ್ಯದಿಂದ ನಮಸ್ಕಾರ ಎಂದರೂ ಸಾಕು. ಪಾದಮುಟ್ಟಿ ನಮಸ್ಕರಿಸಿಕೊಳ್ಳುವ ವ್ಯಕ್ತಿಗೆ ಮತ್ತೊಂದು ಅರ್ಹತೆ, ಹಾಗೆ ನಮಸ್ಕರಿಸಿದ ವ್ಯಕ್ತಿಯ ಪಾದಗಳನ್ನೂ ಅಷ್ಟೆ ಗೌರವ, ಭಯ, ಭಕ್ತಿಯಿಂದಲೇ ನಮಸ್ಕರಿಸುವ ತೀರಾ ಅನಿವಾರ್ಯವಾದ ಸೌಜನ್ಯವಿರಬೇಕು. ಹಾಗೆ ಮಾಡಿದಾಗ ಮಾತ್ರ ನಮಸ್ಕರಿಸಿಕೊಂಡ ವ್ಯಕ್ತಿಗೂ ಒಂಚೂರು ಬೆಲೆ ಬರುತ್ತೆ. ನಮಸ್ಕರಿಸಿದವನ ಶ್ರಮವೂ ತಿಳಿಯುತ್ತೆ. ಇನ್ನೂ ಒಂದು ಮಾತು; ಇದು ಪುಟ್ಟ ಕಂದಮ್ಮಗಳಿಗೆ ಅನ್ವಯಿಸದು. ಹಾಗೆ ಪಾದಗಳನ್ನು ಕನಿಷ್ಠವೆಂದೇ ಭಾವಿಸುವ ಒಂದು ಮನೋಧರ್ಮವಿದೆ. ಪಾದಗಳೇ ಕನಿಷ್ಠವೆಂದೇ ಭಾವಿಸುವ ಕನಿಷ್ಠ ವ್ಯಕ್ತಿತ್ವದ ಹಾಗೂ ನಮಸ್ಕರಿಸಿಕೊಂಡೇ ದೊಡ್ಡೋರು ಎಂದು ಭ್ರಮಿಸುವ ಜನರ ಪಾದಗಳನ್ನು ಹಿಡಿದರೆ ಯಾವ ಮತ್ತು ಯಾರ ಪಾಪ ಪರಿಹಾರವಾಗುತ್ತೊ? ಬಹುತೇಕರು ನನ್ನಂತಾ ಸಾಮಾನ್ಯರು ತಿಳಿದಂತೆ ದೇಹದ ಯಾವ ಅಂಗವೂ ಶ್ರೇಷ್ಠವೂ ಅಲ್ಲ; ಕನಿಷ್ಠವೂ ಅಲ್ಲ. ಕಿರುಬೆರಳಿಗೆ ಸಿಗುವ ಮಾನ ಎಲ್ಲದಕ್ಕೂ ಸಹಜವಾಗಿಯೇ ಇದೆ. ಧಾಮರ್ಿಕವಾಗಿ ಪ್ರಭಾವ ಮೆರೆಯುವ ಜನರನ್ನು (ಬೇಕಾದರೆ ಸ್ವಾಮಿಗಳು, ಜಗದ್ಗುರುಗಳು, ಧರ್ಮಗುರುಗಳು ಎಂದೂ ತಿಳಿಯಲೂ ಅಡ್ಡಿಯಿಲ್ಲ) ತಲೆ ಮೇಲೆ ಹೊತ್ತು ತಿರುಗುವ ಮೂರ್ಖತನ, ಮೂಢತೆಗೆ ಧರ್ಮ, ನೀತಿ, ನಿಯಮ, ಪಾಪ, ಪುಣ್ಯದ ಪೌಡರು ಉಗ್ಗುವ ಮಂದಿಯಿದ್ದಾರೆ. ಜಾತಿ, ಧರ್ಮಗಳ ಸೃಷ್ಟಿ ಜೀವವಿಕಾಸ ಸಿದ್ಧಾಂತದಂತೆ, ಮನುಷ್ಯನ ರೂಪು ತಳೆಯುವಿಕೆಯೊಂದಿಗೇ ಆದದ್ದಲ್ಲ. ಅವೆಲ್ಲಾ ಅಂಜುಬುರುಕ ನಮ್ಮ ಹಳೆಯ ತಲೆಮಾರುಗಳ ಮುತ್ತಜ್ಜರ ಸೃಷ್ಟಿ. ಅಪ್ಪ ನೆಟ್ಟ ಆಲದ ಮರಕ್ಕೇ ಜೋತು ಬೀಳುವುದು ತಪ್ಪು ಎಂದು ತಿಳಿಹೇಳುವ ಬುದ್ಧಿವಂತರಿಗೆ ಸಾವಿರಾರು ವರ್ಷಗಳಷ್ಟು ಹಳೆಯದಾದ, ತಳಬುಡವಿಲ್ಲದ, ಬರೀ ಮೇಲು, ಕೀಳು, ದ್ವೇಷ, ಅಸೂಯೆ ಹುಟ್ಟಿಸುವ ಜಾತಿ, ಧರ್ಮ, ದೇವರು, ಪೂಜೆ, ಪುನಸ್ಕಾರ, ಪ್ರಾರ್ಥನೆ, ಹರಕೆ ಇವು ಯಾಕೆ ಬೇಕೆನಿಸುತ್ತಾವೊ? ಬಹು ಸೋಜಿಗದ ಸಂಗತಿ. ಅದಕ್ಕೆ ನನಗೆ ಮತ್ತೆ ಕಾಡುವುದು ಹಸುಕಂದಮ್ಮಗಳ ಪುಟ್ಟ ಪಾದಗಳು. ನಮ್ಮ ಅಹಂ, ದೊಡ್ಡಸ್ಥಿಕೆಯ ಮುರಿಯಲು ಪುಟ್ಟ ಪಾದಗಳಿಗೆ ಹಣೆ ಹಚ್ಚಬೇಕು. ಅವುಗಳನ್ನು ಹಾಗೆ ಸುಮ್ಮನೆ ಕಣ್ಣಿಗೊತ್ತಿಕೊಳ್ಳಬೇಕು. ಯಾವ ದೇವರು, ಧರ್ಮ, ಜಾತಿ, ಧರ್ಮಗುರು ಬೇಕಿಲ್ಲ ನಮ್ಮ ಮನವ ಸಂತೈಸಲು ತನುವ ತಣಿಸಲು; ಸಾಕು ನಸುನಗುವ, ಅಳುವ, ಪಿಳಿಪಿಳಿ ಕಣ್ಣು ಬಿಡುವ, ಕೈ ಕಾಲು ಅತ್ತಿತ್ತ ಆಡಿಸಿ ನಲಿಯುವ ಹಸುಕಂದಮ್ಮಗಳ ಪುಟ್ಟ ಪಾದಗಳು. ಇರುವ ಒಂದೇ ಜಲುಮದಿ ನಾವು ನಾವಾಗಿ ಬದುಕಿ, ನಮ್ಮತನ ಮೆರೆಯಲು, ನಮಗೂ ಮನುಷ್ಯರೆಂಬ ಒಂದಷ್ಟು ವೈಯಕ್ತಿಕ ಗೌರವವಿದೆಯೆಂಬ ಕಾರಣಕ್ಕೆ ಯಾರಿಗೋ ಬಾಗಿ ಬೆನ್ನು ಉಳುಕಿಸಿಕೊಳ್ಳುವುದಕ್ಕಿಂತ, ಅವನ ಉಪೇಕ್ಷೆಗೆ ಒಳಗಾಗುವುದಕ್ಕಿಂತ ಪುಟ್ಟ ಪಾದಗಳ ಮೇಲೆ ಹಣೆ ಹಚ್ಚಿ ನೋಡಿ, ಒಂದೆರಡು ಕ್ಷಣಬಿಟ್ಟು ಕಣ್ಣಿಗೊತ್ತಿಕೊಂಡು ನೋಡಿ... ಎಲ್ಲವನ್ನೂ ಅಕ್ಷರಗಳಲ್ಲೆ ಹೇಳುವುದೂ ಅಸಾಧ್ಯ!

-ಕಲಿಗಣನಾಥ ಗುಡದೂರು

ಭಾನುವಾರ, ಮಾರ್ಚ್ 15, 2009

ಜೋಗಿ ಸರ್ ಬರೆದ 'ಕ್ಷಮಿಸಿ'ಗೆ ಪ್ರತಿಕ್ರಿಯೆ


ಪಾಠ ಕಲಿಸುವ ಸಮಯ...
ಜೋಗಿ ಸರ್, ಬಲು ಜೋರು ಬರೆದಿದ್ದೀರಿ. ಇನ್ನೂ ನಾವೆಲ್ಲಾ ಒಂದಾಗಿ ಈ ಸನಾತನಿ ಸುಡೋ ಹಿಂದೂವಾದಿಗಳಿಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ. ಕಲಾವಿದ, ಸಾಹಿತಿ, ಹೋರಾಟಗಾರ, ಪತ್ರಕರ್ತರನ್ನು ಅಷ್ಟಾಗಿಯೂ ಜನಸಾಮಾನ್ಯರು ಅವನ ಜಾತಿಯಿಂದ ಗುರುತಿಸಲು ಇಷ್ಟಪಡಲಾರರು. ಅದರಲ್ಲೂ ಲೆಜೆಂಡ್ಗಳನ್ನು ಅದ್ಹೇಗೆ ಜಾತಿ, ಜನಾಂಗ, ಬಣ್ಣ, ಪ್ರದೇಶ, ಧರ್ಮ, ದೇಶ ಎಂದು ಗುರುತಿಸಲಾದೀತು. ಈ ಮೂರ್ಖರು ಕೇವಲ ದಕ್ಷಿಣ ಕನ್ನಡದಲ್ಲಷ್ಟೆ ಅಲ್ಲ; ಅಂಥವರನ್ನು ಪೋಷಿಸುವ ಪಕ್ಷ, ಸಕರ್ಾರಗಳೇ ಇರುವಾಗ ಇವರು ಇಲ್ಲದ ಜಾಗೆಯಿಲ್ಲ. ಕೆಲವೇ ದಿನಗಳಲ್ಲಿ ಮಹಾನ್ ರಾಷ್ಟ್ರ ನಾಯಕರ ಸಾಲಿನಲ್ಲಿ ಯಡಿಯೂರಪ್ಪ, ಅಡ್ವಾಣಿ, ವಾಜಪೇಯಿ, ಮೋದಿ, ಬಾಳಠಾಕ್ರೆ, ಮುತಾಲಿಕ್, ತೊಗಾಡಿಯಾ ಸೇರಿದಂತೆ ಸಂಘ ಪರಿವಾರದ ಮುಖಂಡರ ಫೋಟೊಗಳನ್ನು ಎಲ್ಲಾ ಸಕರ್ಾರಿ ಮತ್ತು ಸಾರ್ವಜನಿಕ ಕೇಂದ್ರ ಹಾಗೂ ಕಚೇರಿಗಳಲ್ಲಿ ಕಡ್ಡಾಯವಾಗಿ ಜೋತುಬೀಳಿಸಬೇಕು ಎಂಬ ಆರ್ಡರ್ ಬಂದರೂ ಅಚ್ಚರಿಪಡಬೇಕಿಲ್ಲ. ನಿಮ್ಮ ನೇರ, ಇರಿಯುವ ಬರೆಹದಿಂದ ನಮ್ಮೆಲ್ಲರಲ್ಲೂ ಚೈತನ್ಯ ತುಂಬಿದೆ. ಕೇವಲ ಬರೆಹದ ಮೂಲಕ ಸಾವಿರ ಪುಟಗಳಲ್ಲಿ ಬರೆದರೂ ಇಂಥಹ ಮೂಢರ ಮನಸ್ಸು ಬದಲಾದೀತು ಎಂದು ಬಯಸುವುದೂ ತಪ್ಪು. ಸಾಧ್ಯವಿದ್ದರೆ ನಾವೆಲ್ಲರೂ ಬೀದಿಗಿಳಿದು ಸನಾತನಿಗಳ ಕಿವಿಹಿಂಡುವ ಕಾಲ ಸನ್ನಿಹಿತವಾಗಿದೆ. ಇಲ್ಲದಿದ್ದರೆ ಕೇವಲ ಹೇಮಂತ ಹೆಗಡೆಗೆ ಕೇಳಿದ ಪ್ರಶ್ನೆ ನಮ್ಮ ಪ್ರತಿ ಮಾತಿಗೂ, ಅಕ್ಷರ, ಸೀನು, ಉಗುಳು ಏನೆಲ್ಲಾ ಕ್ರಿಯೆಗಳಿಗೂ ಅನ್ವಯಿಸಿದರೂ ಅಚ್ಚರಿಪಡಬೇಕಿಲ್ಲ. ನೋಡಿ, ಆಕ್ಟಿವಿಸ್ಟ್ ರೀತಿಯಲ್ಲಿ ಕೆಲಸ ಮಾಡಿದರೆ ಮಾತ್ರ ಏನಾದರೂ ಸಾಧ್ಯವಾದೀತು. ಇಲ್ಲವಾದರೆ ನಮ್ಮನ್ನೆಲ್ಲಾ ಏನೋ ಬರೆತಾವೆ... ಬೊಗಳ್ತಾವೆ... ನಮಗೇನೂ ಆಗಲ್ಲ ಎಂದು ಉಗುಳಿದರೂ ಮುಖ ಒರೆಸಿಕೊಳ್ಳುವ ಭಂಡರು ಭಾವಿಸುವುದರಲ್ಲಿ ಅನುಮಾನವಿಲ್ಲ. ಅನ್ನಿಸಿದ್ದನ್ನೆಲ್ಲಾ ಬರೆದುಬಿಟ್ಟೆ...
-ಕಲಿಗಣನಾಥ ಗುಡದೂರು

ಸೋಮವಾರ, ಮಾರ್ಚ್ 9, 2009

ನಮ್ಮೆಲ್ಲರ ನಲ್ಮೆಯ ಮೇಸ್ಟ್ರು


ಬೈ ಟು ಟೀ ಕುಡಿಯುತ್ತಾ... ಲಂಕೇಶ ನೆನಪು!



ಲಂಕೇಶ ಇವತ್ತು ಇಲ್ಲ ಎಂದೇ ಎಲ್ಲರೂ ಮಾತನಾಡುವುದು ಉಂಟು. ಹೈದರಾಬಾದ್ ಕನರ್ಾಟಕ ಪ್ರದೇಶದ ಎಲ್ಲ ಆಕಾರ, ವಿಕಾರ ಹೊಂದಿದ ಸಿಂಧನೂರಿನ ಸುಕಾಲಪೇಟೆ ರಸ್ತೆಗುಂಟ ನಾಲ್ಕು ಹೆಜ್ಜೆ ಹಾಕಿದರೆ ಎಡಕ್ಕೆ ನಾಲ್ಕಾರು ತಳ್ಳುಗಾಡಿಗಳಲ್ಲಿ ಕಾಯಿಪಲ್ಯೆ ಮಾರುವವರ ಮಧ್ಯೆ ಮಸಾಲೆ ಸಾಮಾನು ಮಾರುವ ಮತ್ತೊಂದು ತಳ್ಳುಗಾಡಿ ಕಣ್ಣಿಗೆ ಕಾಣುತ್ತದೆ. ಅಲ್ಲಿ ಈಗಲೂ ನಮ್ಮ ನಿಮ್ಮೆಲ್ಲರ ಪ್ರೀತಿಯ ಲಂಕೇಶ ಮೇಸ್ಟ್ರು ಜೀವಂತವಿದ್ದಾರೆ. ಇಂದಿಗೂ ಉಸಿರಾಡುತ್ತಾರೆ. ಹಿಂದಿನ ಮೆಣಸಿನಕಾಯಿ ಮಾರುಕಟ್ಟೆಯ ಘಾಟಿಗೂ ಹೆದರದೆ ಪುಟ್ಟ ತಳ್ಳುಗಾಡಿಯಲ್ಲಿ ಠಿಕಾಣಿ ಹೂಡಿದ್ದಾರೆ ಲಂಕೇಶ. ಏಳನೇ ಇಯತ್ತೆ ಓದಿದೋರು ಅಂದರೆ ಅನಕ್ಷರಸ್ಥ ಎಂಥಲೇ ತಿಳಿಯುವ ಸಂಪ್ರದಾಯದಲ್ಲಿ ಏಳನೇ ಇಯತ್ತೆ ಓದಿ, ಲಂಕೇಶರ ಬಗ್ಗೆ ಅಪಾರ ಪ್ರೀತಿ ಹೊಂದಿದ ಮಸಾಲೆ ಸಾಮಾನು ಮಾರುವ ಮುನ್ನಾ ಎಂಬ ಪ್ರೀತಿಯ ಹುಡುಗನಿರುವುದೇ ನನ್ನಂಥವ ಅದೆಷ್ಟು ಜೀವಂತಿಕೆಯಿಂದ ಬದುಕುತ್ತಿರುವುದು. ಲಂಕೇಶರ ದಿಟ್ಟತನಕ್ಕೂ ನಮ್ಮ ಮುನ್ನಾ ಮುದುಡಿಕೊಂಡೇ ಇರುವ, ಮಾತನಾಡುವ ಪರಿ ಅಜಗಜಾಂತರ. ಲಂಕೇಶರ ಜನುಮದಿನದಂದು ಅವರ ನೆನಪನ್ನು ಯಾರೊಂದಿಗೆ ಹಂಚಿಕೊಳ್ಳಲಿ ಎಂದು ಯೋಚಿಸಿದಾಗ ಥಟ್ಟನೆ ಹೊಳೆದವನು ಗೆಳೆಯ ಮುನ್ನಾ. 'ಎಲ್ಲಿ ಇದ್ದಿ ಮುನ್ನಾ? ನನ್ನೊಂದಿಗೆ ಬೈ ಟು ಟೀ ಕುಡಿಯಲು ಬರ್ತಿಯಾ?' ಕೇಳಿದೆ. ಅತ್ಯಂತ ಸಂಭ್ರಮದಿಂದಲೇ ಬಂದ ಮುನ್ನಾ ಕಣ್ಣು, ಮನಸ್ಸುಗಳಲ್ಲಿ ಲಂಕೇಶ ತುಳುಕಾಡುತ್ತಿದ್ದರು. ಬೈ ಟು ಟೀಗೆ ಆರ್ಡರ್ಮಾಡಿ ಮಾತಿಗೆಳೆದೆ. ನನಗೆ ದಕ್ಕಿದ ಲಂಕೇಶ ಮತ್ತಷ್ಟು ಅಜಾನುಬಾಹುವಿನಂತೆ ಕಂಡರು ಮುನ್ನಾ ಮನಬಿಚ್ಚಿ ಮಾತನಾಡಿದಾಗ. ಏಳನೇ ತರಗತಿಗೆ ನಾನು ಓದಿಗೆ ಶರಣು ಹೊಡೆದೆ. ನನ್ನ ಚಿಕ್ಕಪ್ಪ ಅಬ್ದುಲ್ಸಾಬ್ ಕಿರಾಣಿ ಅಂಗಡಿಯಲ್ಲಿ ಕೈ ಬಾಯಿ ಕೆಲಸ ಕೇಳುತ್ತಿದ್ದೆ. ಆತ ವಿವಿಧ ಪತ್ರಿಕೆಗಳನ್ನು ತರಿಸುತ್ತಿದ್ದ. ಲಂಕೇಶ ಪತ್ರಿಕೆಯೂ ಒಂದು. ಲಂಕೇಶ ಪ್ರಪಂಚ ಪರಿಚಯವಾಗಿದ್ದು ಆಗಿನಿಂದಲೇ. ಲಂಕೇಶರನ್ನು ಮುನ್ನಾ ಎಷ್ಟು ಹಚ್ಚಿಕೊಂಡಿದ್ದ ಎಂಬುದನ್ನು ಹೇಳಿ ಮತ್ತೆ ಆತನ ಮಾತುಗಳನ್ನು ಓದಲು ಅವಕಾಶ ಕೊಡುವೆ. ಲಂಕೇಶರ ಆತ್ಮಕಥೆ 'ಹುಳಿಮಾವಿನ ಮರ'ವನ್ನು ತರಿಸಿ, ಎರಡ್ಮೂರು ಬಾರಿ ಓದಿದ ಮುನ್ನಾ, ತನ್ನ ಡಗ್ಲಾಸ್ ಸೈಕಲ್ನ್ ಚೈನ್ ಕವರಿನ ಮೇಲೆ ಬರೆಸಿದ್ದು ಯಾವುದೇ ಸಿನಿಮಾದ ಹೆಸರಲ್ಲ ಹೊರತಾಗಿ 'ಹುಳಿಮಾವಿನ ಮರ'. ಅವನ ಸೈಕಲ್ ಕಂಡೊಡನೆ ನನ್ನ ಕಣ್ಣುಗಳು ಮೊದಲು ನೋಡುತ್ತಿದ್ದುದು ಮುನ್ನಾ ಪ್ರೀತಿಯಿಂದ ಬರೆಯಿಸಿದ್ದ 'ಹುಳಿಮಾವಿನ ಮರ'. ಲಂಕೇಶರು ಮುನ್ನಾನನ್ನು ಆವರಿಸಿದ್ದು ಅಷ್ಟಿಷ್ಟಲ್ಲ. ಯಾವುದೇ ವಿಶ್ವವಿದ್ಯಾಲಯದ ಬಹುತೇಕ ಕನ್ನಡ ಸೇರಿದಂತೆ ಇತರೆ ಸಾಹಿತ್ಯದ ವಿದ್ಯಾಥರ್ಿಗಳು ಓದದಷ್ಟು ಲಂಕೇಶರ ಪುಸ್ತಕಗಳನ್ನು ಓದಿದ್ದಾನೆ. ಬರೀ ಪರೀಕ್ಷೆಗಾಗಿ ಕಾಟಾಚಾರಕ್ಕೆಂಬಂತೆ ಓದಿಲ್ಲ. ಓದಿ ತನ್ನ ಜೀವನದಲ್ಲಿ ಎದುರಾದ ಅನೇಕ ಕಷ್ಟ, ನಷ್ಟಗಳನ್ನು ಎದುರಿಸಿದ್ದಾನೆ. ಮತ್ತಷ್ಟು ಉತ್ತಮನಾಗಲು ಯತ್ನಿಸಿದ್ದಾನೆ. ಆತನಿಗೆ ಮೋಡಿ ಮಾಡಿದ್ದು 'ಗುಣಮುಖ' ನಾಟಕ. ಲಂಕೇಶ ಇವತ್ತು ನಮ್ಮೊಂದಿಗೆ ಭೌತಿಕವಾಗಿ ಇರದಿದ್ದರೂ ಅವರ ಕೃತಿಗಳಿವೆ. ಅವರ ವಿಚಾರಗಳಿವೆ ಎಂದೇ ಸ್ವಲ್ಪ ಮಟ್ಟಿಗೆ ಸಮಾಧಾನ ಪಟ್ಟುಕೊಳ್ಳುವ ಮುನ್ನಾ, ಲಂಕೇಶರು, 'ಗುಣಮುಖ' ಹಕೀಂ ಅಲಾವಿಖಾನ್ನಂತೆ ಎಂದು ಅಭಿಮಾನಪಡುತ್ತಾನೆ. ನಾದಿರ್ಷಹಾನ ರೋಗಗ್ರಸ್ತ ಮನಸ್ಸನ್ನು ಗುಣಮುಖಮಾಡಿದ ಹಾಗೆ ಇಂದು ಎಲ್ಲೆಡೆ ಕಾಣುವ ರೋಗಗ್ರಸ್ತ ಮನಸ್ಸುಗಳನ್ನು ಗುಣಮುಖಮಾಡುವ ಕನ್ನಡದ ನೈಜ ಹಕೀಂ ಅಲಾವಿಖಾನ್ ಜೊತೆ ಇರದಿದ್ದರೂ ನಾವೆಲ್ಲರೂ ಹಕೀಂನಂತಾಗುವ ಅನಿವಾರ್ಯತೆಯಿದೆ. ನಾದಿರ್ಷಹಾನಂತೆ ಎಲ್ಲಾ ರೋಗಗ್ರಸ್ತ ಮನಸ್ಸುಗಳು ಗುಣಮುಖವಾದರೆ ಸುತ್ತಲಿನ ಪ್ರಪಂಚ, ಬದುಕು ಎಷ್ಟು ಸುಂದರವಾಗಿರುತ್ತದೆ ಎಂದಾಗ ಮುನ್ನಾನ ಕಣ್ಣುಗಳಲ್ಲಿ ನೂರು ಚುಕ್ಕೆಗಳು ಮಿನುಗಿದವು. ಲಂಕೇಶರ 'ಪಾಪದ ಹೂಗಳು', 'ಕಲ್ಲು ಕರಗುವ ಸಮಯ', 'ಗಿಳಿಯು ಪಂಜರದೊಳಗಿಲ್ಲ', 'ಹುಳಿಮಾವಿನ ಮರ', 'ಟೀಕೆ ಟಿಪ್ಪಣೆ ಭಾಗ-1, ಭಾಗ-2' ಹೀಗೆ ಹಲವು ಕೃತಿಗಳನ್ನು ಓದಿದ ಮುನ್ನಾ ಈಗಲೂ ತಾನು ಹತ್ತಾರು ವರ್ಷಗಳ ಹಿಂದೆ ಓದಿದ್ದನ್ನು ಈಗಲೂ ನಿನ್ನೆ, ಮೊನ್ನೆ ಓದಿದಂತೆ ಅಲ್ಲಿಯ ಘಟನೆ, ಪಾತ್ರಗಳು ಮತ್ತು ಚಿತ್ರಣಗಳನ್ನು ಬಿಚ್ಚಿಡುತ್ತಾನೆ. ಇದೆಲ್ಲಾ ಆಶ್ಚರ್ಯವೆನಿಸಿದರೂ, ತಾನು ಮಾರುವ ಮಸಾಲೆ ಸಾಮಾನುಗಳಿಗಿಂತಲೂ ಹೆಚ್ಚು ನೆನಪು ಇಟ್ಟಿರುವುದು ಲಂಕೇಶರ ಟೀಕೆ ಟಿಪ್ಪಣೆಗಳನ್ನು. 'ಲಂಕೇಶ ನಿನಗೆ ಯಾಕೆ ಇಷ್ಟವಾದರು?' ಎಂದು ಟೀ ಗುಟುಕರಿಸುತ್ತಾ ಕೇಳಿದೆ. ಕುಡಿಯುತ್ತಿದ್ದ ಟೀ ಕಪ್ನ್ನು ಟೇಬಲ್ ಮೇಲಿಟ್ಟು ಟೀ ಆರದಿರಲೆಂದು ಅಂಗೈ ಮುಚ್ಚಿ ಮಾತನಾಡಿದ. ಲಂಕೇಶ ಮನಸ್ಸು ಮಾಡಿದ್ದರೆ ರಾಜನಂತೆ ಬದುಕಬಹುದಾಗಿತ್ತು. ಹಣ, ಅಂತಸ್ತು, ಸ್ಥಾನ ಮಾನಗಳಿಗೆ ಬಡಿದಾಡುವ ಇಂದಿನ ದಿನಗಳಲ್ಲಿ ಲಂಕೇಶ ಒಂದು ಅಪವಾದದಂತೆ ಬದುಕಿದರು. ಅವರ ನಿಸ್ವಾರ್ಥ ಬದುಕು ನನಗೆ ಇಷ್ಟ. ಅವರ ಬರೆಹ ಮತ್ತು ಬದುಕು ಒಂದೇಯಾಗಿದ್ದುದು ಮತ್ತಷ್ಟು ಅವರನ್ನು ಹಚ್ಚಿಕೊಳ್ಳಲು ಕಾರಣ. ಥೇಟ್ ಹಳ್ಳಿಯ ಅನುಭವಿ ವ್ಯಕ್ತಿಯಂತೆಯೇ ಲಂಕೇಶ ಕೊನೆಯವರೆಗೂ ಬದುಕಿದರು. ಅವರ 'ಮುಟ್ಟಿಸಿಕೊಂಡವರು' ಕಥೆ ಓದಿದ ನಂತರವೇ ನನ್ನ ಮನದ ಮೂಲೆಯಲ್ಲಿದ್ದ ಚೂರು ಅದೆಂಥದೊ 'ಅವರನ್ನು, ಅಂಥವರನ್ನು' ಮುಟ್ಟಿಸಿಕೊಳ್ಳಬಾರದೆನ್ನುವ ಭಾವನೆ ಬದಲಾಗಿದ್ದು. ಮತ್ತೊಂದು ಕಥೆ 'ಬಾಗಿಲು' ಕೂಡ ಅಷ್ಟೆ. ಅರ್ಹರಿಗೆ ಸಹಾಯ ಮಾಡುವುದು ತಪ್ಪಲ್ಲ; ಆದರೆ ಸಹಾಯಕ್ಕೆ ಮುನ್ನಾ ಪೂವರ್ಾಪರ ವಿಚಾರಮಾಡಬೇಕೆನ್ನುವ ಲಂಕೇಶರ 'ಬಾಗಿಲು' ಕಥೆಯ ಥೀಮ್ ನನ್ನನ್ನು ಈಗಲೂ ಕಾಡುತ್ತಿರುತ್ತದೆ. ಸಮಾಜದ ಓರೆ ಕೋರೆ ತಿದ್ದುವಲ್ಲಿ ಲಂಕೇಶರ ಪಾತ್ರ ಅದ್ವಿತೀಯ ಎಂಬುದು ಕೇವಲ ಬಾಯುಪಚಾರದ ಮಾತಲ್ಲ. ಅವರ ಒಂದು ಲೇಖನಕ್ಕೆ ಸಕರ್ಾರ ಉರುಳಿಸುವ ಶಕ್ತಿಯಿತ್ತು ಎಂಬುದು ಹಿಂದಿನ ಫ್ರಾನ್ಸ್ ಮಹಾಕ್ರಾಂತಿಯನ್ನು ನೆನಪಿಸುತ್ತದೆ. ಅವರ ಬರವಣಿಗೆಯಲ್ಲಿ ಸತ್ಯನಿಷ್ಠತೆ, ಜೀವಂತಿಕೆ, ಜೀವಪರತೆ, ನಿಷ್ಠುರತೆ ಇಂದಿನ ಪತ್ರಿಕೆಗಳ ವರದಿಗಾರರು, ಸಂಪಾದಕರೂ ಮೈಗೂಡಿಸಿಕೊಳ್ಳಬೇಕಿದೆ ಎಂದು ಪ್ರೀತಿಯಿಂದಲೇ ತನ್ನ ಕಳಕಳಿ ಹೊರಹಾಕುತ್ತಾನೆ ಮುನ್ನಾ. ಲಂಕೇಶ ಪತ್ರಿಕೆಯ ಭಾಗವಾಗಿದ್ದ ಪುಂಡಲೀಕಶೇಠ್ ಬರೆಯುತ್ತಿದ್ದ 'ಹುಬ್ಬಳ್ಳಿಯಾಂವ' ಅಚ್ಚುಮೆಚ್ಚು. ನನ್ನಂಥವವನಿಗೆ ಎಲ್ಲಿಗೂ ಹೋಗಲು ಆಗಲ್ಲ. ಲಂಕೇಶರ ಟೀಕೆ ಟಿಪ್ಪಣಿ ಮೂಲಕ ಜಗತ್ತಿನ ವಿವಿಧ ಪ್ರದೇಶ, ಜನಾಂಗ, ವಿಭಿನ್ನ ಸಂಸ್ಕೃತಿಗಳನ್ನು ಪರಿಚಯಿಸಿದ ಜೊತೆಗೆ ನನ್ನ ಅಲ್ಪ ಫಾರ್ಮಲ್ ಓದಿಗೆ ಇನ್ಫಾರ್ಮಲ್ ಆಗಿ ಜ್ಞಾನ ಹೆಚ್ಚಿಸಿದವು. 'ನೀಲು' ಬಗ್ಗೆ ಪ್ರತಿ ಸಂಚಿಕೆಯಿಂದ ಮತ್ತೊಂದಕ್ಕೆ ಕುತೂಹಲ ಇರುತ್ತಿತ್ತು. 'ನಿಮ್ಮಿ ಕಾಲಂ' ಬರೆಯುತ್ತಿದ್ದುದು ಹುಡುಗಿ ಎಂದೇ ತಿಳಿದಿದ್ದೇ ಎಂದು ಮುನ್ನಾ ಮುಗುಳ್ನಕ್ಕ. ನಂತರ ಗೊತ್ತಾಗಿ... ಏನೂ ಹೇಳದೆ ಕಿರುನಗೆ ಬೀರಿದ. ಲಂಕೇಶರ ಬರೆಹಗಳಿಂದ ಅಷ್ಟೊಂದು ಪ್ರೇರಣೆ, ಪ್ರಭಾವಕ್ಕೆ ಒಳಗಾಗಿಯೂ ಯಾಕೆ ಬರೆಹಗಾರನಾಗಲಿಲ್ಲ? ಎನ್ನುವ ಪ್ರಶ್ನೆಗೆ ನನ್ನ ನಿರೀಕ್ಷೆ ಮೀರಿ ಉತ್ತರಿಸಿದ. 'ನನಗೆ ಊಟ ಮಾಡೋದು ಗೊತ್ತು. ಅಡುಗೆ ಮಾಡಲು ಬರೊಲ್ಲ' ಎಂದು ನನ್ನಂಥವ ಬರೆಹಗಾರನಾಗಿ ಏನೆಲ್ಲಾ ಬರೆಯಬೇಕೆಂಬ ಗರ್ವ, ಅಭಿಮಾನವನ್ನು ಟೀ ಕುಡಿದ ಖಾಲಿ ಕಪ್ಪನ್ನು ಕೆಳಗೆ ಇಟ್ಟಂತೆ ಇಟ್ಟುಬಿಟ್ಟ. ಲಂಕೇಶರು ಜೀವಂತವಿದ್ದಾಗಲೇ ಅವರನ್ನು ಖುದ್ದಾಗಿ ನೋಡಬೇಕೆಂಬ ಆಸೆಯಿತ್ತು. ಅದು ನನ್ನಂಥವನಿಗೆ ಅಸಾಧ್ಯವೆನಿಸಿತು. ದುಡಿಯುವುದೇ ಹತ್ತಿಪ್ಪತ್ತು ರೂಪಾಯಿ. ಇನ್ನು ನೂರಾರು ರೂಪಾಯಿ ಖಚರ್ುಮಾಡಿ ಬೆಂಗಳೂರಿಗೆ ಹೋಗಿ ಭೇಟಿಯಾಗುವುದು ಕನಸಿನ ಮಾತೇ ಆಗಿತ್ತು. ಕಡೆ ಅವರೇನಾದರೂ ಬಂದಿದ್ದರೆ ನೋಡಬಹುದಿತ್ತು. ಇರಲಿ ಬಿಡಿ. ಅವರನ್ನು ನೋಡಲೇಬೇಕೆಂದೇನೂ ಇಲ್ಲ. ಅವರು ತೀರಿಕೊಂಡ ಸುದ್ದಿಯನ್ನು ಪೇಪರ್ನಲ್ಲಿ ಓದಿದ ಕ್ಷಣವೇ ಕಣ್ಣುಗಳು ತೇವಗೊಂಡವು. ನನಗೆ ಮತ್ತು ನಮ್ಮ ಮನೆಯ ಕಂಬವೇ ಆಗಿದ್ದ ಲಂಕೇಶ ಇನ್ನಿಲ್ಲವಾದರು ಎಂಬಂತೆ ಅನ್ನಿಸಿತು. ಛೆ... ನಮ್ಮ ಮನೆಯ ಸದಸ್ಯರು ತೀರಿಕೊಂಡಾಗ ಅಷ್ಟು ದುಃಖವಾಗಿರಲಿಲ್ಲ. ಮುಖ ತಗ್ಗಿಸಿದ ಮುನ್ನಾ ಖಾಲಿ ಕಪ್ಪು ನೋಡುತ್ತಾ ಕುಳಿತ. ಹೆಗಲ ಮೇಲೆ ಅಂಗೈಯಿಟ್ಟು 'ಬಾ ಹೊರಗೆ ಹೋಗೋಣ...' ಎಂದೆ. ಮತ್ತೆ ಅವನು ಸುಕಾಲಪೇಟೆಯ ಮಸಾಲೆ ಸಾಮಾನು ಮಾರುವ ತಳ್ಳುಗಾಡಿಯತ್ತ ನಡೆದ... ಅವನು ಹೋದ ಹಾದಿಯನ್ನೇ ಕೆಲ ಕಾಲ ದಿಟ್ಟಿಸುತ್ತಾ ನಿಂತೆ. ಲಂಕೇಶ ಅವನಲ್ಲಿ... ಇನ್ನೂ ಹಲವರಲ್ಲಿ ಮೈ ಚರ್ಮದಂತೆ ಇದ್ದಾರೆ ಅಂತ ಅನ್ನಿಸಿತು.


-ಕಲಿಗಣನಾಥ ಗುಡದೂರು

ಶನಿವಾರ, ಫೆಬ್ರವರಿ 28, 2009

'ಮಾಮೂಲಿ ಗಾಂಧಿ' ಮಾ.1ರಂದು ಬಿಡುಗಡೆಯಾಗುತ್ತಿದೆ...





ನಿಮ್ಮೊಂದಿಗೆ ಕೆಲ ನಿಮಿಷ ನನ್ನ ಅಂತರಾಳದ ಮಾತುಗಳನ್ನು ಹಂಚಿಕೊಳ್ಳುವ ದಿನ ಬಂದಿದೆ. 'ನೀನು ಕಥೆಗಳನ್ನು ಬರೆಯುತ್ತಾ ಇರಬೇಕು...' ಎಂಬ ಗೆಳೆಯರ ಮತ್ತು ಹಿರಿಯ ಹಿತೈಷಿಗಳೆಲ್ಲರ ಬೆನ್ನು ತಟ್ಟಿದ್ದಕ್ಕೆ ಕೇವಲ ಪುಳುಕಿತನಾಗದೆ, ನಿಮ್ಮ ಕೈಗಳಿಗೆ ಮಾ.1,2009ರಂದು 'ಮಾಮೂಲಿ ಗಾಂಧಿ' ರೂಪದಲ್ಲಿ ಮೂರನೇ ಕಥಾ ಸಂಕಲನ ನೀಡುತ್ತಿದ್ದೇನೆ. ಕಳೆದ ವರ್ಷ ಅನುಭವಿಸಿದ ತಲ್ಲಣಗಳ ಮರೆಯಲು 'ಮಾಮೂಲಿ ಗಾಂಧಿ' ಕಥೆಗಳನ್ನು ರಚಿಸಿದ್ದೇನೆ. ಇಲ್ಲಿ ಬರೆದ ಬಹುತೇಕ ಕಥೆಗಳು ಹೊಚ್ಚ ಹೊಸವು. ಮೊದಲನೇ ಕಥಾ ಸಂಕಲನ 'ಉಡಿಯಲ್ಲಿಯ ಉರಿ' ಇನ್ನೂ ಈಗಲೂ ತನ್ನ ಕಿಚ್ಚನ್ನು ಹೊತ್ತಿಸುತ್ತಿದೆ ಎಂಬುದಕ್ಕೆ ಫೆ.26ರಂದು 'ಸಂಯುಕ್ತ ಕನರ್ಾಟಕ' ಪತ್ರಿಕೆಯ ಕಥಾಲೋಕ ಅಂಕಣದಲ್ಲಿ ಹಿರಿಯ ಕಥೆಗಾರ ಮಹಾಬಲಮೂತರ್ಿ ಕೊಡ್ಲೆಕೆರೆ ಅವರು ಉಡಿಯಲ್ಲಿಯ ಉರಿ ಬಗ್ಗೆ ಮತ್ತೊಮ್ಮೆ ಆಪ್ತವಾಗಿ ಬರೆದು, ನನ್ನಂತ ಕಥೆಗಾರರ ಕಥೆಗಳನ್ನು ಓದುವ, ವಿಮಶರ್ಿಸುವ ಹೃದಯವಂತಿಕೆ ಹಿರಿಯರಲ್ಲಿ ಬೆಳೆಯಬೇಕು ಎಂಬುದನ್ನು ಹೇಳಿದ್ದಾರೆ. ಎರಡನೇ ಕಥಾ ಸಂಕಲನ 'ಮತಾಂತರ' ಪ್ರತಿಗಳಿಗಾಗಿ ಈಗಲೂ ಅನೇಕರು ಕೇಳುತ್ತಿರುತ್ತಾರೆ. ಆದರೆ ಪ್ರತಿಗಳೆಲ್ಲಾ ಮುಗಿದಿವೆ. ಎರಡು ಕಥಾ ಸಂಕಲನಗಳಲ್ಲಿದ್ದ ಕಥೆಗಳಿಗಿಂತ ಒಂದಷ್ಟು ಮಟ್ಟಿಗೆ ಕಥಾ ಹಂದರದಲ್ಲಿ ಹೊಸತನ ಸಾಧಿಸುವ ಪ್ರಯತ್ನ 'ಮಾಮೂಲಿ ಗಾಂಧಿ' ಕಥಾಸಂಕಲನದಲ್ಲಿ ಮೂರ್ತ ರೂಪ ತಾಳಿದೆ. ಫೆಬ್ರುವರಿ-09 ಮಯೂರದಲ್ಲಿ 'ಕನ್ನಡಿಯೊಳಗಿನ ಚಿತ್ರಗಳು' ಕಥೆ ಪ್ರಕಟವಾದಾಗ, ಹಿಂದೆ ಬರೆದ ಎಲ್ಲ ಕಥೆಗಳಿಗಿಂತ ತೀರಾ ಭಿನ್ನವಾಗಿ ಬರೆದಿದ್ದಿ. ರೀತಿಯ ಹೊಸತನ ಕನ್ನಡ ಕಥಾ ಲೋಕಕ್ಕೆ ಅವಶ್ಯ ಎಂಬುದನ್ನು ಅನೇಕ ಗೆಳೆಯರು ನನ್ನೊಂದಿಗೆ ಹಂಚಿಕೊಂಡಿದ್ದರು. ಕಥೆ ಇನ್ನೇನು ತಿಂಗಳ ಕಥೆಯಾಗಿ ಆಯ್ಕೆಯಾಗುತ್ತೆ ಎಂದೇ ಹಲವು ಗೆಳೆಯರು ಕನಸು ಕಟ್ಟಿದ್ದರು. ರನ್ನರ್ ಅಪ್ಗೆ ಸಂತೃಪ್ತಿ ಪಟ್ಟುಕೊಳ್ಳಬೇಕಾಯಿತು. ಕಥೆಯ ಬಗ್ಗೆ ಹಿರಿಯ ವಿಮರ್ಷಕರಾದ ಎಚ್.ಎಸ್.ರಾಘವೇಂದ್ರರಾವ್ ಬರೆದದ್ದು ಹೀಗೆ... "ಅತಿ ನಿಕಟವಾದ ವರ್ತಮಾನವನ್ನು ತೆಗೆದುಕೊಂಡು ಕಥೆ ಬರೆಯುವುದು ದೊಡ್ಡ ಸವಾಲು. 'ಕನ್ನಡಿಯೊಳಗಿನ ಚಿತ್ರಗಳು' ಕಥೆಯು ಇಂತಹ ಸವಾಲನ್ನು ಸ್ವೀಕರಿಸುತ್ತದೆ. ಇದರಲ್ಲಿ, ಕಲಾವಿದನೂ ಆದ ನಕ್ಸಲೀಯನು ತನ್ನ ಕಲೆ ಮತ್ತು ಮಾನವೀಯತೆಗಳ ಮೂಲಕ ಎಲ್ಲರನ್ನೂ ಆಕಷರ್ಿಸುತ್ತಾನೆ. ಆದರೆ, ಅವನ ವರ್ತನೆಯ ಹಿಂದೆ ಯಾವುದೇ ಅಜೆಂಡಾ ಕಾಣಿಸುವುದಿಲ್ಲ. ಬದಲಾಗಿ ಅಲ್ಲಿ ಹುಂಬವೆನ್ನಿಸುವ ಒಳ್ಳೆಯತನವಿದೆ. ವ್ಯವಸ್ಥೆಯ ಕ್ರೌರ್ಯವು ಎಲ್ಲರಿಗೂ ತಿಳಿದಿರುವುದೇ. ಆದರೆ ಕಥೆಯಲ್ಲಿ ಭೀಭತ್ಸ, ಮಾನವತೆ ಮತ್ತು ಕ್ರೌರ್ಯಗಳ ಓವರ್ಡೋಸ್ ಇರುವುದರಿಂದ ಕಥೆಯ ವಾಚನೀಯತೆಯು ಕಡಿಮೆಯಾಗುತ್ತದೆ. ಆದರೂ ಇದು ಹಲವು ಸಾಧ್ಯಗಳನ್ನು ಪಡೆದಿರುವ ಕಥೆ.' ಇನ್ನೂ ಉಳಿದ ಎಲ್ಲ ಕಥೆಗಳ ಬಗ್ಗೆ ಹೀಗೆ ಹೇಳಲಾಗಿದ್ದರೂ ನನ್ನನ್ನು ಬಹುವಾಗಿ ಕಾಡಿ ಬರೆಸಿದ ಕಥೆಯೆಂದರೆ 'ಎರಡು ಪಾರಿವಾಳಗಳು'. ಅಬ್ಬಾ ಕಥೆಯನ್ನು ನಾನೇ ಬರೆದನೊ? ಇಲ್ಲಾ ಎರಡು ಪಾರಿವಾಳಗಳೇ ಬರೆಯಿಸಿದವೊ? ಗೊತ್ತಿಲ್ಲ. ಯುದ್ಧೋತ್ಸಾಹಿ ಮನಸ್ಸುಗಳ ಮುಂದೆ ಹಲವು ಪ್ರಶ್ನೆಗಳ ಜೊತೆಗೆ ಕಣ್ಣ ಮುಂದೆಯೇ ಮನುಷ್ಯ ಸಹಜ ಪ್ರೀತಿಯ ದಾರಿಯನ್ನು ಹುಡುಕಿವೆ ಎರಡು ಪಾರಿವಾಳಗಳು. ಹಾಗೆಯೇ 'ದೊಡ್ಡವರ ನಾಯಿ', 'ಒಂದು ಸಹಜ ಸಾವು' ಇವತ್ತಿನ ರಾಜಕೀಯ, ಸಾಮಾಜಿಕ ಕಲುಷಿತ ಮನಸುಗಳ ಬಗ್ಗೆ ವಿಷಾದ ಮೂಡಿಸುವ ಜೊತೆಗೆ ನಾವೆತ್ತ ಸಾಗಬೇಕು ಎಂಬ ಸೂಕ್ಷ್ಮಗ್ರಹಿಕೆಯನ್ನು ಕಥಾ ಹಿನ್ನೆಲೆಯಲ್ಲಿ ಅಂಗೈ ಗೆರೆಗಳಂತೆ ತೋರಿಸುತ್ತದೆ. ಕೊನೆಯ ಚಿಕ್ಕ ಕಥೆ ಕಥೆಗಾರನೊಂದಿಗೆ ಸುತ್ತ ಮುಸುಕಿರುವ ಕತ್ತಲೆ ನಡೆಸಿರುವ ಸಂವಾದವಿದೆ. ನನ್ನಂತವನಲ್ಲಿರಬಹುದಾದ ಹಮ್ಮು ಬಿಮ್ಮುಗಳನ್ನು ಮುಕ್ತವಾಗಿ ಕತ್ತಲೆ ಪ್ರಶ್ನಿಸಿದೆ. ಹೀಗೆ ಏನೇ ಹೇಳಿದರೂ 'ಕಥಾ ಸಂಕಲನ' ಓದುವ, ಮುಕ್ತವಾಗಿ ಅನಿಸಿಕೆಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ನಿಮಗಲ್ಲದೆ ಮತ್ಯಾರಿಗಿದೆ ಹೇಳಿ? ಹಾಗೆ ನಿಮಗೆ ಅನ್ನಿಸಿದ್ದನ್ನು ನನಗೆ ನೇರವಾಗಿ ಹೇಳಿ ಇಲ್ಲಾ, ಮೇಲ್ ಮಾಡಿ. ತಪ್ಪದೇ ಓದಿ, ಮುಂದಿನ ದಿನಗಳಲ್ಲಿ ತಪ್ಪದೇ ಪಾಲಿಸುತ್ತೇನೆ. ಯಾಕೆ ಹೀಗೆಲ್ಲಾ ಹೇಳುತ್ತೇನೆ ಅಂದರೆ... ನಾನು ನಿಮ್ಮೆಲ್ಲರ ಪ್ರೀತಿ ಅಂಗೈಯಲ್ಲಿ ಅರಳಬೇಕಿದೆ. ಘಮಘಮಿಸಬೇಕಿದೆ. ಇದರೊಂದಿಗೆ ಆಮಂತ್ರಣ ಪತ್ರಿಕೆ ಅಂಟಿಸಿರುವೆ. ಸಾಧ್ಯವಿದ್ದರೆ ಬನ್ನಿ. ಬಾರದಿದ್ದರೂ ಬೇಸರವಿಲ್ಲ. ಹೇಗೆ ಸಂಪಕರ್ಿಸಿದರೂ ನಾನಂತೂ ಅತೀವ ಖುಷಿ ಅನುಭವಿಸುತ್ತೇನೆ. ಗುಲ್ಬರ್ಗದ ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ, ನಿ. ತನ್ನ ಉದ್ಘಾಟನಾ ಸಮಾರಂಭ ಮತ್ತು ಪ್ರಕಾಶನದ ಮೊದಲ ಬಾರಿಗೆ ನನ್ನ 'ಮಾಮೂಲಿ ಗಾಂಧಿ' ಕಥಾ ಸಂಕಲನ ಸೇರಿದಂತೆ ಚಂದ್ರಕಾಂತ ಕುಸನೂರು ಅವರ 'ಸುರೇಖಾ ಮ್ಯಾಡಂ ಎಂಬ ನಾಟಕ, ಡಾ.ಪ್ರಭು ಖಾನಾಪುರೆ ಬರೆದ 'ದೃಷ್ಟಿ' ಕವನ ಸಂಕಲನ ಮತ್ತು ಸಹ ಕಥೆಗಾತರ್ಿ ಕಾವ್ಯಶ್ರೀ ಮಹಾಗಾಂವಕರ್ ಬರೆದ 'ಬೆಳಕಿನೆಡೆಗೆ' ಕಥಾ ಸಂಕಲನ ಬಿಡುಗಡೆಗೊಳ್ಳುತ್ತಿವೆ. ಸಿದ್ಧಲಿಂಗೇಶ್ವರ ಕಲ್ಯಾಣ ಮಂಟಪ ಹತ್ತಿರದ ಶ್ರೀ ರೇಣುಕಾಆರ್ಯ ಕಲ್ಯಾಣ ಮಂಟಪದಲ್ಲಿ ಪುಸ್ತಕಗಳ ಬಿಡುಗಡೆ. ಬೆಳಿಗ್ಗೆ 10ಕ್ಕೆ. ತಪ್ಪದೇ ಬನ್ನಿ. ಅಂದ ಹಾಗೆ ಸಂಸದ ಕೆ.ಬಿ.ಶಾಣಪ್ಪ ಕಾರ್ಯಕ್ರಮ ಉದ್ಘಾಟಿಸಿದರೆ, ಡಾ.ಮಲ್ಲೇಪುರಂ ಜಿ.ವೆಂಕಟೇಶ ಪುಸ್ತಕಗಳನ್ನು ಬಿಡುಗಡೆಮಾಡುವರು. ಗುವಿಗು ಕುಲಪತಿ ಡಾ.ಬಿ.ಜಿ.ಮೂಲಿಮನಿ ಅಧ್ಯಕ್ಷತೆವಹಿಸುವರು. ಡಾ.ಸ್ವಾಮಿರಾವ್ ಕುಲಕಣರ್ಿ ಪುಸ್ತಕಗಳನ್ನು ಪರಿಚಯಿಸುವರು. ಕನ್ನಡನಾಡು ಲೇಖಕರ ಬಳಗದ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣೆ ಮತ್ತು ಉಪಾಧ್ಯಕ್ಷ ಡಾ.ಡಿ.ಬಿ.ನಾಯಕ ಅವರು ಸೇರಿದಂತೆ ನೀವೂ ಇರುತ್ತೀರಿ ಎಂದೇ ತಿಳಿದಿದ್ದೇನೆ.
ತಪ್ಪದೇ ಸಂಪಕರ್ಿಸಿ, ಕಥಾ ಸಂಕಲನ ಓದಿ ಬೆನ್ತಟ್ಟಿ...
ನಿಮ್ಮ ಪ್ರೀತಿಯ ಬಯಸುತ್ತಾ...
ಕಲಿಗಣನಾಥ ಗುಡದೂರು
ಸಂಪರ್ಕ



ಕಲಿಗಣನಾಥ ಗುಡದೂರುಇಂಗ್ಲಿಷ್ ಉಪನ್ಯಾಸಕಸಂಕೇತ ಪಿ.ಯು.ಕಾಲೇಜ್,ಸಿಂಧನೂರು-೫೮೪೧೨೮



ಜಿಲ್ಲೆ: ರಾಯಚೂರುಮೊ: 9916051329

ಗುರುವಾರ, ಫೆಬ್ರವರಿ 12, 2009

ಮಂಗಳವಾರ, ಜನವರಿ 20, 2009

ಚೂರಾದ ಚಿತ್ರಗಳ ಆಯುತ್ತಾ...

ಕಳೆದ ವರ್ಷವಷ್ಟೆ ನಿಮ್ಮ ಓದಿಗೆೆ ನನ್ನ ಎರಡನೇ ಬಹು ನಿರೀಕ್ಷಿತ ಹಾಗೂ ಚಚರ್ಿತ ಮತಾಂತರ ಕಥಾ ಸಂಕಲನ ನೀಡಿದ ನಂತರ ಮೂರನೇ ಕಥಾ ಸಂಕಲನ ಮಾಮೂಲಿ ಗಾಂಧಿಯನ್ನು ನಿಮ್ಮ ಮನೆಗೆ ಕಳಿಸುತ್ತಿದ್ದೇನೆ. ಈ ವರ್ಷ ನನ್ನ ಜೀವನದ ಜೋಕಾಲಿ ಹರಿದು ಬಿದ್ದದ್ದು ಎಷ್ಟು ಸಲವೊ? ಮತ್ತೆ ಸಾವರಿಸಿಕೊಳ್ಳುತ್ತಾ ಕನಸಿನ ಗಿಡಕ್ಕೆ ಹಗ್ಗ ಕಟ್ಟಿದ್ದೆಷ್ಟು ಸಲವೊ? ಹಾಗೆ ಗೆದ್ದೆನೆಂದು ಜೀಕುತ್ತಾ ಹರಿಸಿದ ಕಣ್ಣೀರು, ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬಹು ಒತ್ತಡದಲ್ಲಿ ಕೆಲಸ ಮಾಡುತ್ತಿರುವ ನನ್ನಲ್ಲಿಯ ಕಥೆಗಾರ ಮಾಮೂಲಿ ಗಾಂಧಿ ಕಥಾ ಸಂಕಲನದಲ್ಲಿ ಬಹಳ ಬದಲಾಗಿದ್ದಾನೆ. ಸಿದ್ಧ ಮಾದರಿ ಹಾಗೂ ಎಲ್ಲ ಇಸಂಗಳನ್ನು ಮೀರಿ ಹಾಗೆ ಸುಮ್ಮನೆ ಬರೆಯಬೇಕೆಂಬ ತುಡಿತ ಹಾಗೂ ಬಹು ನಿರೀಕ್ಷೆಯೊಂದಿಗೆ ಈ ಕಥೆಗಳನ್ನು ಬರೆದಿರುವೆ. ನಾನು ನನಗಿಂತಲೂ ಹೆಚ್ಚು ಪ್ರೀತಿಸುತ್ತಿದ್ದ ಜೀವದ ಗೆಳತಿ ಶಿವಲೀಲಾ ಅದೆಷ್ಟು ಬೇಗನೆ ನನ್ನಿಂದ ಭೌತಿಕವಾಗಿ ದೂರವಾಗಿಬಿಟ್ಟಳು. ನನ್ನ ಪ್ರೀತಿಯೇ ಆಕೆಗೆ ಉರುಳಾಯಿತೊ? ಸುತ್ತಲಿನ ಮನಸ್ಸುಗಳ ಮಾತು ಉರುಳಾದವೊ? ಆಕೆಯನ್ನು ಕಳೆದುಕೊಂಡು ಕಳೆದ ಏಳೆಂಟು ತಿಂಗಳುಗಳಿಂದ ನಾನು ಬದುಕಿದ್ದು ಥೇಟ್ ಸಂತನಂತೆಯೇ! ಮನಸ್ಸು ಒಡೆದ ಕನ್ನಡಿಯಾಯಿತು. ಚೂರಾದ ಕನ್ನಡಿಯ ತುಣುಕುಗಳಲಿ ಕಂಡ ಚಿತ್ರ ವಿಚಿತ್ರ ನಿಲುವುಗಳನ್ನು ಸೂಕ್ಷ್ಮವಾಗಿ ನೋಡಿದೆ. ದಿನಕ್ಕೆ ಹದಿನೈದು ತಾಸುಗಳ ಕೆಲಸದ ಒತ್ತಡದ ಮಧ್ಯೆಯೂ ನನಗೇ ಗಾಬರಿಯಾಗುವಂತಾ ಕಥೆಗಳನ್ನು ಬರೆದೆ. ಹಿಂದಿನ ಉಡಿಯಲ್ಲಿಯ ಉರಿ (2000, ಲೋಹಿಯಾ ಪ್ರಕಾಶನ, ಬಳ್ಳಾರಿ) ಮತ್ತು ಮತಾಂತರ (2007, ಸಂಸ್ಕೃತಿ ಪ್ರಕಾಶನ, ಬಳ್ಳಾರಿ) ಕಥಾ ಸಂಕಲನಗಳಿಗಿಂತ ಭಿನ್ನವಾದ ಕಥೆಗಳನ್ನು ಬರೆದ ಖುಷಿಯಲ್ಲೆ ಏನೆಲ್ಲವನ್ನೂ ಸ್ವಲ್ಪ ಮಟ್ಟಿಗಾದರೂ ಮರೆಯಲು ಸಾಧ್ಯವಾಯಿತು. ತೀರಾ ಸಾಮಾನ್ಯವೆನಿಸುವ ಹಾಗೆ ಬಹುವಾಗಿ ಕಾಡಿದ ಅನೇಕ ಸಂಗತಿಗಳು ಮಾಮೂಲಿ ಗಾಂಧಿ ಕಥಾ ಸಂಕಲನದಲ್ಲಿ ಕಥೆಗಳಾಗಿ ರೂಪುಗೊಂಡಿವೆ. ಬರೆಹಗಾರನೆಂದರೆ ಕೇವಲ ಅಕ್ಷರಗಳ ಮೂಲಕ ಯುಟೋಪಿಯಾ ಸೃಷ್ಟಿಸುವುದಲ್ಲ. ಸುತ್ತಲಿನ ಬದುಕಿನ ಏರು ಇಳಿವುಗಳಲ್ಲಿ ಹತ್ತಿ ಇಳಿಯಬೇಕು. ಸಮಾಜಮುಖಿ ಪ್ರಜ್ಞೆ, ಮನುಷ್ಯತ್ವದ ನೆಲೆ, ಸಾಧ್ಯವೆನಿಸಬಹುದಾದ ಕಲ್ಪನೆಗಳೇ ನನ್ನ ಕಥೆಗಳ ತಿರುಳು ಎಂಬುದು ನನ್ನ ಗ್ರಹಿಕೆ. ವಿವಿಧ ಪತ್ರಿಕೆಗಳ ಸಾಪ್ತಾಹಿಕ ಪುರವಣಿ ಮತ್ತು ಸಾಹಿತ್ಯ ವಿಭಾಗ ಬದಲಾಯಿಸಿಕೊಂಡ ಕಥಾ ಪ್ರಕಟಣಾ ನೀತಿಯಿಂದ ಕಥೆಗಳ ಪ್ರಕಟಣೆಯೇ ದೊಡ್ಡ ಸಮಸ್ಯೆ ಎನಿಸಿದೆ. ಇದು ನನ್ನೊಬ್ಬನ ಸಮಸ್ಯೆಯಲ್ಲ; ಗೆಳೆಯ ಸಾಲಿಯಿಂದ ಹಿಡಿದು ಹಿರಿಯ ಕಥೆಗಾರ ಕುಂವಿಯವರೆಗೂ ಕಥೆಗಳನ್ನು ಪ್ರಕಟಿಸುವುದು, ಆ ಮೂಲಕ ಓದುಗರನ್ನು ತಲುಪುವುದು ಕಷ್ಟವೆನಿಸಿದೆ. ಕನ್ನಡ ಕಥಾಲೋಕ ಹೈದರಾಬಾದ್ ಕನರ್ಾಟಕ ಪ್ರದೇಶದ ಕಥೆಗಾರರನ್ನು ಬಹು ಅಚ್ಚರಿಯಿಂದ ನೋಡುತ್ತಿರುವುದು ಮತ್ತು ನಮ್ಮ ಬಗ್ಗೆ ಬಹಳ ನಿರೀಕ್ಷೆಯಿಟ್ಟುಕೊಂಡಿರುವುದಕ್ಕೆ ಮುಜುಗರದ ಜೊತೆಗೆ ಜವಾಬ್ದಾರಿಯಿಂದಲೇ ಕಥೆಗಳನ್ನು ಬರೆಯಬೇಕೆಂಬ ಒತ್ತಾಸೆ ಮೂಡುತ್ತಿದೆ. ನನ್ನಂತಾ ನಾನ್-ಅಕಾಡೆಮಿಕ್ ಪರಿಸರದಲ್ಲಿ ಬದುಕುತ್ತಿರುವ ನನ್ನ ಬಗ್ಗೆ ಸಾಹಿತ್ಯ ವಲಯ ಇನ್ನೂ ಒಂದು ತೆರನಾದ ಅಸ್ಪೃಶ್ಯತೆಯಿಂದ ಕಾಣುತ್ತಿರುವುದಕ್ಕೆ ನನಗೆ ಆಗಾಗ ಅಸಹ್ಯವೆನಿಸುವುದುಂಟು. ಅವಮಾನ, ಹೀಯಾಳಿಕೆ, ಧಿಕ್ಕರಿಸುವಿಕೆ ಎದುರಿಸಿಯೇ ಬದುಕಬೇಕೆಂದರೆ ನನಗೆ ಒಂದು ತೆರನಾದ ಖುಷಿ. ಕುಂವಿಯವರು ಆಗಾಗ್ಗೆ ನೀಡಿದ ಸಲಹೆಯಂತೆ ನನ್ನ ಪಾಡಿಗೆ ನಾನು ಕಥೆಗಳನ್ನು ಬರೆಯುತ್ತಾ ಹೋಗುತ್ತಿದ್ದೇನೆ. ರಾಜ್ಯದ ವಿವಿಧ ಭಾಗಗಳಲ್ಲಿ ನನ್ನ ಕಥೆಗಳನ್ನು ಓದಿ ತಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳುವ ನೂರಾರು ಗೆಳೆಯರಿದ್ದಾರೆ. ಬರೆದಿದ್ದೆಲ್ಲಾ ಒಳ್ಳೆಯದೇ ಎಂದು ಬೆನ್ನು ತಟ್ಟುವ ಹಿರಿಯರಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರಿನಂತಾ ಪರಿಸರದಲ್ಲೇ ಸಿಗುವ ನೂರಾರು ಕಥಾ ವಸ್ತುಗಳು ನನ್ನ ಕುತೂಹಲ ಹೆಚ್ಚಿಸಿವೆ. ಹಾಳೆಯಿಂದ ಬ್ಲಾಗ್ಗಳತ್ತ ಹೊರಳುತ್ತಿರುವ ಈ ಸಂದರ್ಭದಲ್ಲಿ ವಿವಿಧ ಬ್ಲಾಗ್ಗಳನ್ನು ಬ್ರೌಸ್ಮಾಡುತ್ತಾ ಹೊಸದರತ್ತ ಮುಖಮಾಡಿದ್ದೇನೆ. ಕಥೆಗಾರ ನವಲಕಲ್ ಮಹಂತೇಶಣ್ಣ ಒಂದು ದಿನ ಇದ್ದಕ್ಕಿದ್ದಂತೆ ಫೋನ್ಮಾಡಿ, ಗುಲ್ಬರ್ಗದ ಡಾ.ಸ್ವಾಮಿರಾವ್ ಕುಲಕಣರ್ಿಯವರು ಮತ್ತು ಅಪ್ಪಾರಾವ್ ಅಕ್ಕೋಣೆ ಮತ್ತಿತರರು ಒಂದು ಹೊಸ ಪ್ರಕಾಶನ ಹುಟ್ಟುಹಾಕಿದ್ದಾರೆ. ಮೊದಲ ಸಂಕಲನ ರೂಪದಲ್ಲಿ ನಿನ್ನ ಕಥಾ ಸಂಕಲನ ತರಲು ಬಯಸಿದ್ದಾರೆ. ಅವರಿಗೆ ಕಥೆಗಳನ್ನು ಕೊಡುತ್ತಿಯಾ? ಅಂತ ಕೇಳಿ ದಿಗಿಲು ಹುಟ್ಟಿಸಿದರು. ಅಣ್ಣಾ, ಈಗ ನನ್ನ ಬಳಿ ಇರೋದು ಐದೇ ಕಥೆಗಳು. ಅವರಿಗೆ ಬೇಕಾದಷ್ಟು ಕಥೆಗಳನ್ನು ಹೇಗೆ ಬರೆದುಕೊಡುವುದು? ಎಂದೆ. ಬರೆಯಪ್ಪಾ, ನೀನು ಹೇಗಾದರೂ ಬರೆಯುತ್ತಿ. ಎಂಟು ಕಥೆಗಳನ್ನು ಕಳಿಸು ಎಂದು ಪ್ರೀತಿಯ ಆಜ್ಞೆ ಹೊರಡಿಸಿದರು. ನನ್ನ ಕಥೆಗಳಿಗೂ ಓದುಗರಿದ್ದಾರೆ ಎಂಬುದು ಹಿಂದಿನ ಎರಡು ಕಥಾ ಸಂಕಲನಗಳು ಸಾಬೀತುಪಡಿಸಿವೆ. ಈಗಾಗಲೇ ಎರಡೂ ಕಥಾ ಸಂಕಲನಗಳ ಪ್ರತಿಗಳು ಮುಗಿದಿದ್ದರೂ ಮರುಮುದ್ರಣ ನಡೆಯಬೇಕಾಗಿದೆಯಾದರೂ ಅದಕ್ಕೆ ಯಾರಾದರೂ ಮುಂದೆ ಬರಬೇಕಲ್ಲ. ನನ್ನಿಂದಂತೂ ಎರಡೊ ಮೂರು ಹೊತ್ತು ಅರೆಬರೆ ಉಂಡು ಇದ್ದದ್ದು ಉಟ್ಟು, ನನಗೇ ಅನ್ನಿಸುವಂತೆ ತೀರಾ ಸರಳವಾಗಿ ಬದುಕಬೇಕೆಂಬ ನನಗೆ ಸ್ವಂತ ಖಚರ್ಿನಲ್ಲಿ ಸಂಕಲನ ಪ್ರಕಟಿಸಲು ದೇಹದ ಯಾವುದೋ ಒಂದು ಭಾಗ ಮಾರಬೇಕಷ್ಟೇ! ನನ್ನ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಕವಿ ಜಿ.ಎನ್.ಮೋಹನ್ ಮತ್ತು ಕಥೆಗಾರ ಅಣ್ಣ ಚಿತ್ರಶೇಖರ ಕಂಠಿ ಅವರ ಮೂಲಕ ಬಳ್ಳಾರಿಯ ಲೋಹಿಯಾ ಪ್ರಕಾಶನದ ಚಿಕ್ಕಪ್ಪ ಸಿ.ಚನ್ನಬಸವಣ್ಣನವರು 2000ರಲ್ಲಿ ಉಡಿಯಲ್ಲಿಯ ಉರಿ ಕಥಾ ಸಂಕಲನ ಪ್ರಕಟಿಸಿ ಕನ್ನಡ ಕಥಾಲೋಕಕ್ಕೆ ನನ್ನ ಪರಿಚಯಿಸಿದರು. ಅದಕ್ಕೆ ಅವರೆಲ್ಲರನ್ನೂ ನಾನು ಸದಾ ನೆನೆಯುತ್ತೇನೆ. ಏಳು ವರ್ಷಗಳ ನಂತರ ಮತ್ತೊಂದು ಸಂಕಲನಕ್ಕಾಗುವಷ್ಟು ಕಥೆಗಳಿದ್ದರೂ ಮತ್ತೆ ನನ್ನಪಾಡಿಗೆ ನಾನು ಕೈಕಟ್ಟಿ ಕುಳಿತುಕೊಂಡಿದ್ದೆ. ಬಳ್ಳಾರಿಯ ಸಂಸ್ಕೃತಿ ಪ್ರಕಾಶನದ ಪ್ರಕಾಶಕರೂ ಹಾಗೂ ಆತ್ಮೀಯ ಮಿತ್ರ ಸಿ.ಮಂಜುನಾಥ ಮತಾಂತರ ಕಥಾ ಸಂಕಲನ ಪ್ರಕಟಿಸಲು ಅದೆಷ್ಟು ಮುತುವಜರ್ಿವಹಿಸಿದರು ಎಂದರೆ ಥೇಟ್ ತಮ್ಮ ಮುದ್ದುಮಕ್ಕಳ ಮದುವೆ ಸಂಭ್ರಮದಂತೆ ಪ್ರತಿ ಹೆಜ್ಜೆಯಲ್ಲಿ ಖುಷಿಪಟ್ಟರು. ಸಿ.ಮಂಜುನಾಥ ಮತ್ತು ಪ್ರಕಾಶನದ ಗೆಳೆಯರ ಶ್ರಮದಿಂದ ಮತಾಂತರ ಹೊರಬಂದು ಮೌಲಿಕ ಕಥಾ ಸಂಕಲನವೆಂಬಂತೆ ನಾಡಿನ ವಿವಿಧ ಮಹತ್ವದ ಪತ್ರಿಕೆಗಳಿಂದ ಹೆಗ್ಗಳಿಕೆ ಪಡೆಯಿತು. ಅದಕ್ಕೆಲ್ಲಾ ಸಿ.ಮಂಜುನಾಥ ಮತ್ತು ಬಹುಮುಖ ವ್ಯಕ್ತಿತ್ವದ ಗೆಳೆಯ ವಿ.ಎಂ.ಮಂಜುನಾಥರ ಒತ್ತಾಸೆ ಕಾರಣ. ವಿ.ಎಂ. ಮಂಜುನಾಥ ಮತಾಂತರ ಕಥಾ ಸಂಕಲನಕ್ಕೆ ಅದೆಷ್ಟು ಅದ್ಭುತವಾದ ಮುಖಪುಟ ರಚಿಸಿಕೊಟ್ಟ ಎಂದರೆ ಅನೇಕ ಗೆಳೆಯರು ಬಹುವಾಗಿ ಮೆಚ್ಚಿಕೊಂಡರು. ಆತನ ಪ್ರೀತಿಯ ಮಾತು, ಮನೆಗೆ ಹೋದಾಗ ತೋರಿದ ಆತಿಥ್ಯ ಮರೆಯಲಾರದ್ದು. ಬೆಂಗಳೂರಿನಂತಾ ಊರಿನಲ್ಲಿದ್ದೂ ಹಳ್ಳಿಯಲ್ಲಿ ಬದುಕಿದಂತೆ ಬದುಕುತ್ತಿರುವ ಮಂಜುನಾಥ ನನ್ನ ಎರಡನೇ ಕಥಾಸಂಕಲನ ಮಾರಾಟದಲ್ಲಿ ತೋರಿದ ಕಳಕಳಿ ತನ್ನ ಪುಸ್ತಕ್ಕಾದರೂ ತೋರಿದ್ದಾನೊ ಇಲ್ಲೊ ಗೊತ್ತಿಲ್ಲ. ಆತನ ಮತ್ತು ತಂಗಿಯ ಪ್ರೀತಿಗೆ ಮಾರುಹೋಗಿದ್ದೇನೆ. ಅಂಥಹ ಗೆಳೆಯರ ಪ್ರೀತಿ, ಒತ್ತಾಸೆ ನನ್ನಲ್ಲಿಯ ಕಥೆಗಾರ ಜಾಗೃತಗೊಂಡು ಹೊಸ ಹೊಸ ಕಥೆಗಳನ್ನು ಬರೆಯಲಿಕ್ಕೆ ಪ್ರೇರಣೆ ನೀಡಿತು. ಆರನೇ ಕಥೆಯಾಗಿ ಕನ್ನಡಿಯೊಳಗಿನ ಚಿತ್ರಗಳು ಕಥೆಯನ್ನು ನನ್ನ ಹಿತೈಷಿಗಳಾದ ಸುಧಾ ಬಳಗದ ಮುಖ್ಯಸ್ಥ ಡಿ.ನಾಗರಾಜ ಅವರ ಪ್ರೀತಿಗೆ ಕಟ್ಟುಬಿದ್ದು ಬರೆದು ಕಳಿಸಿದೆ. ಮೊದಲ ಓದಿಗೆ ಬಹು ಮೆಚ್ಚಿಕೊಂಡರಾದರೂ ಕಥೆ ತೀರಾ ದೊಡ್ಡದಾಯಿತೆಂದು ಪ್ರಕಟಿಸಲಾಗದ್ದಕ್ಕೆ ಕೈಕೈ ಹಿಚುಕಿಕೊಂಡರು. ಕಥೆಗಾರ ಗೆಳೆಯ ರಘುನಾಥ ಚ.ಹ. ಅವರನ್ನು ಸಂಪಕರ್ಿಸಿ, ಆ ಕಥೆಯನ್ನು ಮಯೂರಕ್ಕೆ ಕಳಿಸಕೊಟ್ಟೆ. ಒಂದು ದಿನ ಫೋನ್ಮಾಡಿ ಹದಿನೈದು ನಿಮಿಷ ಕಥೆ ಬಗ್ಗೆಯೇ ಮಾತನಾಡಿದರು. ಅದ್ಭುತ ಕಥೆ ಬರೆದಿದ್ದಿಯಾ ಎಂದು ನನ್ನನ್ನು ಮುಜುಗರಕ್ಕೆ ಈಡುಮಾಡಿದರು. ಬಹು ನಿರೀಕ್ಷೆಯಿಂದ ಬರೆದ ಕಥೆ ಸಹಕಥೆಗಾರನಿಗೆ ಇಷ್ಟವಾಗಿದ್ದಕ್ಕೆ ಮತ್ತೆ ಕಥೆಗಳನ್ನು ಬರೆಯತೊಡಗಿದೆ. ಮಾಮೂಲಿ ಗಾಂಧಿ, ಡಾಟರ್ ಆಫ್ ದುರುಗವ್ವ ಮೈದಳೆದರು. ಕಳೆದ ಹಲವು ವರ್ಷಗಳಿಂದ ಕಾಡಿದ ವಿಷಯ ವಸ್ತುಗಳನ್ನು ನನ್ನನ್ನು ಬಹುವಾಗಿ ತೊಡಗಿಸಿಕೊಂಡು ಆ ಕಥೆಗಳನ್ನು ಬರೆದು ಮತ್ತೆ ಮತ್ತೆ ಓದಿದೆ. ಈ ಸಂದರ್ಭದಲ್ಲೆ, ಗುಲ್ಬರ್ಗದಿಂದ ಡಾ.ಸ್ವಾಮಿರಾವ್ ಕುಲಕಣರ್ಿಯವರು ಮತ್ತು ಅಪ್ಪಾರಾವ್ ಅಕ್ಕೋಣೆಯವರು ಫೋನ್ ಮಾಡಿ ಕಥೆಗಳನ್ನು ಕಳಿಸೆಂದು ಒತ್ತಾಯಮಾಡಿದರು. ಅವರಿಗೆ ಹೇಳುತ್ತಿದ್ದುದು ಒಂದೇ ಮಾತು, ಸರ್ ಇದು ನನ್ನ ಮೂರನೇ ಕಥಾ ಸಂಕಲನ, ಓದುಗರು ಬಹಳ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಏನೋ ಒಂದು ಬರೆದು ಪ್ರಕಟಿಸುವುದಲ್ಲ. ನನ್ನ ಮಟ್ಟಿಗೆ ಹಿಂದಿನ ಕಥಾ ಸಂಕಲನಗಳಿಗಿಂತಲೂ ಉತ್ತಮವಾಗಿ ಮೂಡಿಬರಬೇಕು. ನಾನಿನ್ನೂ ಕನ್ನಡ ಕಥಾ ಲೋಕದಲ್ಲಿ ಬಹಳಷ್ಟು ಬೆಳೆಯಬೇಕೆಂಬ ಆಸೆ ಇಟ್ಟುಕೊಂಡಿದ್ದೇನೆ. ಉಳಿದ ನನ್ನ ಸಹ ಕಥೆಗಾರರಿಗಿಂತ ಭಿನ್ನ ಕಥೆಗಳನ್ನು ಬರೆದು ನನ್ನದೇ ಆದ ಐಡೆಂಟೆಟಿ ಹೊಂದಬೇಕು... ಎನ್ನುತ್ತಿದ್ದೆ. ಎಂಟು ಕಥೆಗಳನ್ನು ಟೈಪ್ಮಾಡಿ ಮುಗಿಸಿದಾಗ ಅದೆಂಥದೊ ಸಮಾಧಾನ. ಈ ಹಿಂದೆಯೇ ಬರೆದ ಕತ್ತಲು ಮತ್ತು ಆಸರೆ ಎರಡು ಪುಟ್ಟ ಕಥೆಗಳನ್ನು ಸಂಕಲನದಲ್ಲಿ ಸೇರಿಸಿ, ಒಟ್ಟು ಹತ್ತು ಕಥೆಗಳಾಗಲಿ ಎಂದು ಕಳಿಸಿದೆ. ಬೆಳಿಗ್ಗೆ 8ರಿಂದ 12 ರವರೆಗೆ ಕಾಲೇಜಿನಲ್ಲಿ ಪಾಠ, ಮತ್ತೆ 1ರಿಂದ 4ರವರೆಗೆ ಟ್ಯೂಷನ್, ಸಂಜೆ 5ರಿಂದ ಮಧ್ಯರಾತ್ರಿಯವರೆಗೆ ಪತ್ರಿಕೆಯಲ್ಲಿ ಕೆಲಸ ಹೀಗೆ ಸದಾ ಬ್ಯೂಸಿಯಾಗಿದ್ದರೂ ಮೂರನೇ ಕಥಾ ಸಂಕಲನ ಹೊರಬರುತ್ತಿರುವುದು ನನ್ನ ಪರಿಶ್ರಮಕ್ಕೆ ತಕ್ಕ ಬೆಲೆ ಎನಿಸಿದೆ. ಡಿಸೆಂಬರ್ ಚಳಿಯಲ್ಲಿ ನಡುಗುತ್ತಾ ಪ್ರೆಸ್ನಿಂದ ವಿದ್ಯಾಥರ್ಿ ಮಿತ್ರ ಬಸವರಾಜ ಹಳ್ಳಿಯೊಂದಿಗೆ ನಡೆಯುತ್ತಾ ಮಾತನಾಡಿದ್ದು ಬರೀ ಕಥೆಗಳ ಬಗ್ಗೆಯೇ! ಕಳೆದ ಹಲವು ತಿಂಗಳುಗಳಿಂದ ನನ್ನ ರಾತ್ರಿ ಊಟ ಮಧ್ಯರಾತ್ರಿ ಕಳೆದ ಮೇಲೆಯೇ! ಊಟ ಮುಗಿಸುವಾಗ ಒಂದು, ಒಂದೂವರೆ ಗಂಟೆ ಬಾರಿಸುವುದು ಸಾಮಾನ್ಯ. ಒಂದೆರಡು ದಿನ ನಾನು ಮನೆ ತಲುಪಿದಾಗ 4 ಗಂಟೆ ದಾಟಿತ್ತು. ಕೆಲಸ ಮುಗಿಸುವವರೆಗೆೆ ಊಟ ಮಾಡುವ ಜಾಯಮಾನ ನನ್ನದಲ್ಲ. ಮೊದಲ ದಿನ ಹಾಗೆ ಊಟ ಮಾಡದೆ ಮಲಗಿದೆ. ಸಂಗಾತಿ ಊಟ ಮಾಡದ್ದಕ್ಕೆ ಜೀವ ಚುರ್ರೆಂದಿತು. ಮತ್ತೊಂದು ದಿನ ಮನೆ ತಲುಪಿದಾಗ ಬೆಳಗಿನ ಜಾವ .4 ಗಂಟೆ 05 ನಿಮಿಷ. ಜಗತ್ತಿನಲ್ಲಿ ಯಾರಾದರೂ ಊಟ ಮಾಡುತ್ತಿದ್ದರೊ ಆ ಹೊತ್ತಿನಲ್ಲಿ ಗೊತ್ತಿಲ್ಲ. ಆದರೆ ಸಂಗಾತಿ ಉಮಾ ಮತ್ತು ಮುದ್ದು ಮರಿಗಳಾದ ಸಿರಿ ಮತ್ತು ಭೂಮಿ ನನ್ನನ್ನು ಸಹಿಸಿಕೊಂಡಿದ್ದರ ಬಗ್ಗೆ ನನಗೆ ಬಲು ಸೋಜಿಗದ ಸಂಗತಿ. ಆ ದಿನ ಊಟ ಮುಗಿಸಿ, ಮಲಗಿದಾಗ 4.30. ಮತ್ತೆ ಮರುದಿನ ಎಂಟರೊಳಗೆ ಏಳಬೇಕು. ಕಾಲೇಜಿನಲ್ಲಿ ಮೊದಲ ಪಿರಿಯಡ್ಗೆ ಹಾಜರಾಗಬೇಕೆಂಬ ಧಾವಂತ. ಹೀಗೆ ಎಲ್ಲವನ್ನೂ ತೂಗಿಸಿಕೊಂಡು ನಡೆದರೆ ಮಾತ್ರ ನನ್ನ ಬದುಕ ಬಂಡಿ ಸ್ವಲ್ಪ ಬ್ಯಾಲೆನ್ಸ್ನಲ್ಲಿ ಇರುತ್ತದೆ. ಊರು ಬಿಟ್ಟು ಹೋದರೆ ಉತ್ತಮ ಹುದ್ದೆ, ಪಗಾರ ಸಾಧ್ಯವೆಂದೂ ಗೊತ್ತು. ಆದರೆ ಅಂತಹ ಹುದ್ದೆಗಳನ್ನು ತೊರೆದು ಬಂದಿದ್ದೂ ಇತಿಹಾಸ. ಹಲವರು ಭೇಟಿಯಾದಾಗ ಗಾಬರಿಯಿಂದ ಕೇಳಿದ್ದುಂಟು. ಈಗಂತೂ ಹೀಗೆ ಇದ್ದರೆ ಚೆನ್ನಾಗಿ ಅಂತ ಅನ್ನಿಸುತ್ತಿದೆ. ಸಿಂಧನೂರಿನ ಪರಿಸರವೇ ನನ್ನ ಬರವಣಿಗೆ ಮತ್ತು ಬೆಳವಣಿಗೆಗೆ ಸೂಕ್ತ ಜಾಗೆ ಅಂತ ಅನ್ನಿಸಿದೆ. ಹಾಗೆ ನೂಕಿಕೊಂಡು ಹೋಗಬೇಕು ಕೈ, ಕಾಲು ಸೋಲುವ ತನಕ. ಸಿಂಧನೂರು ಎಂಬ ಊರು ಅತ್ತ ಹಳ್ಳಿಯೂ ಅಲ್ಲದ, ಪಟ್ಟಣವೂ ಅಲ್ಲದ ಒಂದು ವಿಚಿತ್ರ ಊರು. ಬೆಂಗಳೂರು ಮತ್ತು ಮುಂಬೈಯ ಬೆಡಗು ಗುಡದೂರು ಮತ್ತು ಹಸಮಕಲ್ ಹಳ್ಳಿಗಳ ಚೈತನ್ಯ, ಪ್ರೀತಿ, ಕಳಕಳಿಯೂ ಸಿಂಧನೂರಿನಲ್ಲಿ ಮೇಳೈಸಿವೆ. ಇಲ್ಲಿಯ ರಾಜಕೀಯ, ಸಾಮಾಜಿಕ, ಆಥರ್ಿಕ ತಲ್ಲಣಗಳು, ಸಂಕಷ್ಟಗಳು, ಬದಲಾವಣೆಗಳು ಜಗತ್ತಿನ ಯಾವುದೇ ಭಾಗದ ತಲ್ಲಣಗಳ ತದ್ರೂಪು. ಹೀಗಿದ್ದಾಗ ಈ ಊರೇ ಸೂಕ್ತ ಎನಿಸಿದ್ದು ನಿಜ. ನವೆಂಬರ್-2008 ರಲ್ಲಿ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಏರ್ಪಡಿಸಿದ್ದ ಹೊಸ ತಲೆಮಾರಿನ ಸಾಹಿತ್ಯದ ಇತ್ತೀಚಿನ ಒಲವುಗಳು ಎಂಬ ವಿಚಾರ ಸಂಕಿರಣ ನನ್ನ ಓರಗೆಯ ಅನೇಕ ಗೆಳೆಯರನ್ನು ಖುದ್ದಾಗಿ ನೋಡುವ ಅವಕಾಶ ಸಿಕ್ಕಿತು. ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲು ಅವಕಾಶ ಸಿಕ್ಕಿದ್ದಕ್ಕೆ ಡಾ.ರಹಮತ್ ತರೀಕೆರೆ ಮತ್ತು ಕ್ರೈಸ್ಟ್ ಕಾಲೇಜಿನ ಗೆಳೆಯ ರಂಗನಾಥ ಕೆ.ಆರ್. ಅವರನ್ನು ನೆನೆಯಬೇಕು. ಎನ್.ಕೆ.ಹನುಮಂತಯ್ಯ, ಮಂಜುನಾಥ ಲತಾ ಅಂಥಹ ಗೆಳೆಯರ ಜೊತೆಗಿನ ಹರಟೆಯೂ ಬಹಳಷ್ಟು ಕಲಿಸಿದೆ. ಊರು ಬಿಟ್ಟು ಹೋಗುವುದೆಂದರೆ ನನಗೆ ಕುತ್ತಿಗೆಗೇ ಬರುತ್ತದೆ. ಸಂಧ್ಯಾ ಸಾಹಿತ್ಯ ವೇದಿಕೆ ವತಿಯಿಂದ ಚಿಕ್ಕಮಂಗಳೂರು ಜಿಲ್ಲೆ ತರೀಕೆರೆಯಲ್ಲಿ ನಡೆದ ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರ ಸ್ವೀಕರಿಸಲು ತೆರಳಿದಾಗ ಅಲ್ಲಿ ಭೇಟಿಯಾದ ರಾಜಶೇಖರ ಕಕ್ಕುಂದಾ, ಮಲ್ಲಿಕಾಜರ್ುನ ಮತ್ತಿತರ ಗೆಳೆಯರ ಸಂಪರ್ಕವನ್ನೂ ಮರೆಯಲಾಗದು. ಅದಕ್ಕೆಲ್ಲಾ ನಾನು ನೋಡಿದ ವ್ಯಕ್ತಿಗಳಲ್ಲೆ ಸೌಜನ್ಯದ ಸಾಕಾರಮೂತರ್ಿಯಂತಿರುವ ಡಾ.ಆನಂದ ಪಾಟೀಲ್ ಮತ್ತು ಬಹು ಚೈತನ್ಯದ ಅಣ್ಣ ರವೀಂದ್ರ ಹಿರೇಮಠ ಅವರ ಪ್ರೀತಿ ಅಲ್ಲಿಗೆ ತೆರಳುವಂತೆ ಮಾಡಿತು. ಬಾಲಕವಯತ್ರಿ ಮುದ್ದು, ಮತ್ತು ಅಲ್ಲಿಯ ಶಾಲಾ ಮಕ್ಕಳೊಂದಿಗೆ ಪ್ರಶಸ್ತಿ ಪುರಸ್ಕೃತ ಆಗಸ್ಟ್ 15 ಕಥೆಯ ಮುಕ್ತ ಸಂವಾದ ಬಹು ಇಷ್ಟವಾಯಿತು. ತರಿಕೇರೆಯ ಮಕ್ಕಳ ಓದುವ ಹವ್ಯಾಸ ಹಿಡಿಸಿತು. ಸದ್ಯ ಬರೆಯುತ್ತಿರುವ ನನ್ನ ಸಹಕಥೆಗಾರರಿಗೆ ಎದುರಾಗಿರುವ ಎಲ್ಲಾ ಸವಾಲುಗಳು ನನ್ನ ಬೆನ್ನು ಬಿಟ್ಟಿಲ್ಲ ಎಂಬುದರಲ್ಲಿ ಎರಡು ಮಾತಿಲ್ಲ. ನೈಜ ಬದುಕಿಗೆ ತೀರಾ ಹತ್ತಿರದಲ್ಲೆ ಬದುಕುವ ನನಗೆ ನಿತ್ಯ ಎರಡ್ಮೂರು ಹೊಸ ಕಥೆಗಳು ಹೊಳೆಯುತ್ತವೆ. ಆದರೆ ಬರೆಯುವಲ್ಲಿ ವಿಫಲನಾಗುತ್ತೇನೆ. ಬರೆದ ಪ್ರತಿ ಕಥೆಯೂ ತನ್ನಷ್ಟಕ್ಕೆ ತಾನು ಹಿಂದಿನ ಕಥೆಗಳಿಗಿಂತ ಉತ್ತಮ ಎಂದೇ ಹೇಳಿಕೊಳ್ಳುವುದುಂಟು. ಮತ್ತೊಂದು ಕಥೆ ಬರೆದಾಗ ಹೀಗೆಯೇ ಆಗುವುದು. ಮಾಮೂಲಿ ಗಾಂಧಿ ಸಂಕಲನದ ಕನ್ನಡಿಯೊಳಗಿನ ಚಿತ್ರಗಳು, ಎರಡು ಪಾರಿವಾಳಗಳು, ಮಾಮೂಲಿ ಗಾಂಧಿ, ದೊಡ್ಡವರ ನಾಯಿ ಮತ್ತೆ ಮತ್ತೆ ಓದಬೇಕೆಂದು ನನ್ನನ್ನು ಒತ್ತಾಯಿಸುತ್ತವೆ. ನೋಡು ನಮ್ಮ ಕಥೆಗಾರ ಹೇಗೆ ಬರೆದಿದ್ದಾನೆ ಎಂದು ನನ್ನನ್ನೇ ಹೀಯಾಳಿಸುವಂತೆ ತೋರುತ್ತವೆ. ಏನು ಮಾಡುವುದು ಹೀಗೆ ಪ್ರಶ್ನಿಸುವ ಕಥೆಗಳ ಮುಂದೆ ನಾನು ಅಸಹಾಯಕ. ಈ ಬಾರಿ ಕಥೆಗಳನ್ನು ಬರೆಯುವುದರಲ್ಲಿ ಶ್ರಮ ಕಡಿಮೆ. ಕಥೆಗಳು ತಮ್ಮಷ್ಟಕ್ಕೆ ತಾವು ಅರಳಿ ನಿಂತಿವೆ. ಕನಸಿನಲ್ಲಿ ಮಳೆ ನಿಂತ ಕ್ಷಣದಲ್ಲಿ ಆಗಸದಲ್ಲಿ ಮೂಡಿದ ಬಣ್ಣದಬಿಲ್ಲಿನಂತೆ, ಹುಲ್ಲಿನ ತುದಿ ಮೇಲೆ ಕುಳಿತು ಸಂಭ್ರಮಿಸುವ ಮುತ್ತಿನ ಹನಿಯಂತೆ ಸಹಜವಾಗಿಯೇ ಮೂಡಿಬಂದಿವೆ. ಇಷ್ಟೆಲ್ಲಾ ಒತ್ತಡದ ಮಧ್ಯೆ ಕಥೆ ಬರೆಯುವುದು ನಿನಗೆ ಕಷ್ಟವಾಗುತ್ತಿರಬೇಕು. ಕಥೆಗಳನ್ನು ಬರೆಯುವುದನ್ನು ನಿಲ್ಲಿಸಬೇಡ. ರಾಜ್ಯ ಮಟ್ಟದಲ್ಲಿ ಗುರುತಿಸುವ ಹೆಸರಿದೆ... ಹೀಗೆ ನನಗೆ ಈ ಸಲ ಬುದ್ಧಿವಾದ ಮತ್ತು ಹೊಗಳುವ ಜಾಯಮಾನದವರಿಗೆ ಸ್ವಲ್ಪ ನಿರಾಶೆ ಉಂಟಾಗುತ್ತಿದೆ. ಅಂಥವರು ಗಾಬರಿಯಾಗುವಂತೆ ನನ್ನ ಪಾಡಿಗೆ ನಾನು ನನ್ನದೇ ಕಥಾಲೋಕದಲ್ಲೆ ವಿಹರಿಸಿದ್ದೇನೆ. ನಿರಾಯಾಸವಾಗಿ ಸಿಕ್ಕ ಕಥೆಗಳ ಎಳೆಗಳನ್ನು ಬಲು ನಯ ನಾಜೂಕಿನಿಂದ ಕಥೆಗಳನ್ನು ಹೆಣೆದು ನಿಮ್ಮ ಕೈಗೆ ಕೊಟ್ಟಿರುವೆ. ತೀಮರ್ಾನ ಈಗ ನಿಮ್ಮದೆ. 1997ರಲ್ಲಿ ಪ್ರಜಾವಾಣಿ ದೀಪಾವಳಿ ಕಥಾ ಸ್ಪಧರ್ೆಯಲ್ಲಿ ಪ್ರಥಮ ಬಹುಮಾನ ಪಡೆದ ನನ್ನ ಕಥೆ ಉಡಿಯಲ್ಲಿಯ ಉರಿ ಓದಿದ ಹಿರಿಯ ಕಥೆಗಾರ ಎಸ್.ದಿವಾಕರ ಅವರು ಚೆನ್ನೈನಿಂದ ಆಗ ನನಗೆ ಕಂಪ್ಯೂಟರ್ನಲ್ಲಿ ಟೈಪ್ಮಾಡಿದ ನನ್ನ ಹೆಸರಿರುವ ಪತ್ರ ಬಂದಾಗ ನನಗಂತೂ ಭಾರಿ ಸಂತೋಷವಾಗಿತ್ತು. ಅವರು ಪತ್ರದಲ್ಲಿ, ನಿಮ್ಮ ಭಾಗದ ಕಥೆಗಾರರು ಒಂದೇ ತೆರನಾದ ಭಾಷೆ ಬಳಸುತ್ತಿರುವುದರ ಬಗ್ಗೆ ನನ್ನ ಆಕ್ಷೇಪವಿದೆ. ನಿನ್ನಲ್ಲಿ ಉಳಿದವರಿಗಿಂತ ಭಿನ್ನವಾದ ವಿಷಯ ವಸ್ತುಗಳಿವೆ. ನಿರೂಪಣೆ ಮತ್ತು ಸಂಭಾಷಣೆಗೆಳೆರಡನ್ನೂ ಲೋಕಲ್ ಭಾಷೆಯನ್ನೆ ಬಳಸುವುದಕ್ಕಿಂತ ಭಿನ್ನವಾಗಿ ಯೋಚಿಸು ಅಂದು ನೀಡಿದ ಸಲಹೆಗೆ ಮೂರನೇ ಕಥಾ ಸಂಕಲನದಲ್ಲಿ ಪ್ರಯೋಗಮಾಡಿದ್ದೇನೆ. ಹಾಗಾಗಿ ದಿವಾಕರ್ ಸರ್ ಮಾತನ್ನು ವಿಳಂಬವಾದರೂ ಸರಿಯೆನಿಸಿ ಪಾಲಿಸಿದ್ದೇನೆ. ಕಥನ ಕಲೆಯಲ್ಲಿ ಹೊಸು ಜಾಡು ಹಿಡಿಯಲು ಅವರೂ ಕಾರಣರಾಗಿದ್ದಾರೆ. ಒಂದು ದಿನ ವಿ.ಎಂ. ಮಂಜುನಾಥ ಫೋನ್ಮಾಡಿ ನನ್ನನ್ನು ಭಾರಿ ತಬ್ಬಿಬ್ಬುಗೊಳಿಸಿಬಿಟ್ಟ. ಮತಾಂತರ ಕಥಾ ಸಂಕಲನವನ್ನು ಕ್ರಿಯಾಶೀಲ ಸಿನಿಮಾ ನಿದರ್ೇಶಕ ಗಿರೀಶ ಕಾಸರವಳ್ಳಿ ಅವರಿಗೆ ಕೊಟ್ಟಿದ್ದೇನೆ. ಅವರು ಹೈ.ಕ. ಭಾಗದ ಕಥೆಯನ್ನಾಧರಿಸಿ ಒಂದು ಸಿನಿಮಾ ಮಾಡಬೇಕೆಂದಿರುವೆ ಎಂದಿದ್ದಾರೆ. ಆ ಕಥಾ ಸಂಕಲನದ ಅವ್ವ, ಈ ದಾಹ ದೊಡ್ಡದು ಮತ್ತು ಮತಾಂತರ ಕಥೆಗಳು ಸಿನಿಮಾ ಮಾಡಲು ಉತ್ತಮ ವಸ್ತುಗಳಾಗಿವೆ ಎಂದು ಹೇಳಿದ್ದೇನೆ. ಅಮರೇಶ ನುಗಡೋಣಿಯವರ ಸವಾರಿ ಕಥೆ ಓದುತ್ತಿರುವೆ. ನಿನ್ನ ಕಥೆಗಳನ್ನೂ ಪರಿಗಣಿಸುವುದಾಗಿ ಕಾಸರವಳ್ಳಿ ತಿಳಿಸಿದ್ದಾರೆ ಎಂದಾಗ ನನ್ನ ಮೊಬೈಲ್ಗೆ ಆ ದಿನ ಬಂದ ಕರೆ ನಿಜಕ್ಕೂ ನನ್ನನ್ನು ಬಹು ಪರೇಶಾನ್ ಮಾಡಿತ್ತು. ಆಗಲೇ ಹೇಳಿದೆನಲ್ಲ. ನಾನಾಗಿ ಯಾರ ಮುಂದೆ ಕೈಕಟ್ಟಿ, ಕೈಮುಗಿದು ಬೇಡುವುದು ಎಂದರೆ, ಹೋಗಲಿ, ಯಾರನ್ನೋ ಪ್ಲೀಸ್ ಮಾಡುವುದು ಎಂದರೂ ನನಗೆ ಆಗದ ಮಾತು. ಬಾಲಕನಾಗಿದ್ದಾಗಿನಿಂದಲೇ ಒಂದು ತೆರನಾದ ಅಡಾಮೆಂಟ್ ನೇಚರ್ ಮೈಗೂಡಿಸಿಕೊಂಡಿರುವೆ. ನನಗೆ ಯಪ್ಪಾ ಯಣ್ಣಾ, ಯಕ್ಕಾ... ಎನ್ನುತ್ತಾ ಸಣ್ಣದಿರಲಿ, ದೊಡ್ಡದಿರಲಿ, ನನ್ನ ವೈಯಕ್ತಿಕ ಬದುಕು, ಗೌರವ, ಹೆಗ್ಗಳಿಕೆಗೆ ಕಾರಣರಾದರೂ ಡೊಗ್ಗು ಸಲಾಮುಹೊಡೆಯಲು ಮನಸ್ಸಾಗುವುದಿಲ್ಲ. ಕೆಲಸ ಕೆಟ್ಟರೂ ಚಿಂತೆಯಿಲ್ಲ. ಮುಂದಾದರೂ ಎಲ್ಲವೂ ಸರಿಯಾಗುತ್ತೆ ಎಂದೇ ಭಾವಿಸಿ ಸುಮ್ಮನಿದ್ದುಬಿಡುತ್ತೇನೆ. ಆ ನನ್ನ ಮೌನ, ಹಟಮಾರಿತನ ಹಾಗೂ ರಾಜಿಮಾಡಿಕೊಳ್ಳದ ಮನೋಭಾವವೇ ಮೂರನೇ ಸಂಕಲನದ ಕಥೆಗಳಾಗಿ ರೂಪು ತಳೆದಿರುವುದು. ನೇರವಾಗಿ ಹೊಸ ಆಶಯಗಳೊಂದಿಗೆ ಕಥೆಗಳನ್ನು ಬರೆದು ನಿಮ್ಮ ಅಂಗೈ ಅರಗಿಣಿಯಂತೆ ಕೊಟ್ಟಿರುವೆ. ನಿಮಗೆ ಇಷ್ಟವಾದರೂ ಇಷ್ಟವಾಗದಿದ್ದರೂ ನಾನಂತೂ ಸ್ವೀಕರಿಸುತ್ತೇನೆ. ನನಗೆ ಎರಡೂ ಅಷ್ಟೆ. ನಾನು ಬರೆಹ ಇಷ್ಟಕ್ಕೆ ನಿಲ್ಲುವುದಿಲ್ಲವಲ್ಲ. ಇನ್ನೂ ನೂರಾರು ಕಥೆಗಳು, ಕೆಲವು ಕಾದಂಬರಿಗಳು ನನ್ನ ಮನಸ್ಸು, ಹೃದಯ ಮತ್ತು ಕೈಬೆರಳ ತುದಿಗಳಲ್ಲಿವೆ. ಕಳೆದ ಕೆಲವು ವರ್ಷಗಳಿಂದೀಚೆಗೆ ಪೆನ್ನು, ಹಾಳೆ ಹಿಡಿದು ಬರೆಯುವುದು ಇಲ್ಲವಾಗಿದೆ. ಏನೇ ಬರೆಯುವುದಿದ್ದರೆ ಕಂಪ್ಯೂಟರ್ ಮುಂದೆ ಕುಳಿತು ಕೀಬೋಡರ್್ನಲ್ಲಿ ಬೆರಳ ತುದಿ ಆಡಿಸಬೇಕು. ಬೇಕೆನಿಸಿದ್ದನ್ನು ಹಾಗೆ ಉಳಿಸಿ, ಬೇಡವಾದದ್ದನ್ನು ಮೌಸ್ನಿಂದ ಸೆಲೆಕ್ಟ್ಮಾಡಿ ಡಿಲೀಟ್ಮಾಡಬೇಕು. ನಿಮ್ಮ ಸಹಕಾರವಿದ್ದರೆ ಅವುಗಳೂ ಮುಂಬರುವ ವರ್ಷಗಳಲ್ಲಿ ಪ್ರಕಟಗೊಳ್ಳಲಿವೆ. ಉಡಿಯಲ್ಲಿಯ ಉರಿ ಕಥಾ ಸಂಕಲನಕ್ಕೆ ಕಲಾವಿದ ಕೆ.ಕೆ.ಮಕಾಳಿ ಮುಖಪುಟ ಚಿತ್ರ ಬರೆದರೆ, ಎರಡನೇ ಕಥಾ ಸಂಕಲನ ಮತಾಂತರಕ್ಕೆ ಗೆಳೆಯ ವಿ.ಎಂ.ಮಂಜುನಾಥ ನನ್ನ ಕಥೆಗಳ ಅರ್ಥವನ್ನು ಅಂಕುಡೊಂಕು ಗೆರೆಗಳಲ್ಲಿ ಹಿಡಿದಿಟ್ಟಿದ್ದ. ಮೂರನೇ ಕಥಾ ಸಂಕಲನ ಮಾಮೂಲಿ ಗಾಂಧಿ ಸಂಕಲನ ಆದಷ್ಟು ಮಾಮೂಲಾಗಿ (ಸಿಂಪಲ್) ಬರಲಿ ಎಂದೇ ಬಯಸಿದೆ. ಈ ಸಲ ಕವರ್ ಪೇಜ್ ನಾನೇ ತಯಾರುಮಾಡಬೇಕೆಂದು ಪ್ರಯತ್ನಿಸಿದೆ. ಸೂಕ್ತ ಚಿತ್ರ ಆಯ್ಕೆಯಲ್ಲಿ ಬಸವರಾಜ ಹಳ್ಳಿ ಸಹಕರಿಸಿದ. ಸರಳ ಮುಖಪುಟ, ಬೂದು ಬಣ್ಣದ ರ್ಯಾಪರ್ನೊಂದಿಗೆ ಹೊರಬರುತ್ತಿರುವ ಕಥಾ ಸಂಕಲನದ ಬಗ್ಗೆ ನಾನು ಅಪಾರ ವಿಶ್ವಾಸವಿಟ್ಟುಕೊಂಡಿದ್ದೇನೆ. ಹಿಂಬದಿ ಪುಟದ ಚಿತ್ರ ಸಿಂಧನೂರಿನ ಪ್ರತಿಭಾವಂತ ಫೋಟೊಗ್ರಾಫರ್ ಗೆಳೆಯ ಪ್ರಹ್ಲಾದ ತೆಗೆದಿದ್ದು. ಕಳೆದ ಒಂದೂವರೆ ವರ್ಷ ನನ್ನ ಜೊತೆಗಿದ್ದು ಅಪಾರ ಪ್ರೀತಿ ಹಂಚಿಕೊಂಡು ನನ್ನಿಂದ ದೂರವಾಗಲ್ಲ ಎಂದೇ ಕೈಮೇಲೆ ಕೈಹಾಕಿ ಆಣೆ ಮಾಡಿದ ಜೀವದ ಗೆಳತಿ ಶಿವಲೀಲಾ ಭೌತಿಕವಾಗಿ ಇಲ್ಲವಲ್ಲ ಎಂಬುದೇ ನನಗೆ ಭಾರಿ ಅಸಮಾಧಾನ. ಎಲ್ಲ ವೈರುಧ್ಯಗಳ ಮಧ್ಯೆ ಆಕೆಯ ಮಾನಸಿಕ ಕಾಯಿಲೆ ಗುಣಮಾಡಲು, ಅಂತಹ ಜೀವ ಇನ್ನೂ ಬದುಕಲಿ ಎಂದೇ ಎಲ್ಲರಿಗಿಂತಲೂ ಅತಿಯಾಗಿ ಪ್ರೀತಿಸಿದೆ. ಥೇಟ್ ಮಗುವಿನಂತೆಯೇ ಆರೈಕೆಮಾಡಿದೆ. ಹಿರಿಯರ ಮತ್ತು ವೈದ್ಯರ ಸಲಹೆಯಂತೆ ಆಕೆಯ ಕೈಹಿಡಿದೆ. ಏನೆಲ್ಲ ಕನಸುಗಳನ್ನು ಕಟ್ಟಿದೆ. ಕಟ್ಟಿದ ಕನಸುಗಳನ್ನೆಲ್ಲಾ ಈಡೇರಿಸುವುದಾಗಿ ಅದೆಷ್ಟು ಜೀವಂತಿಕೆಯಿಂದ ಹೇಳುತ್ತಿದ್ದಾಕೆ ಒಂದು ದಿನ ಇದ್ದಕ್ಕಿದ್ದಂತೆ ನನ್ನ ಪ್ರೀತಿ ಮತ್ತು ತನ್ನ ತಾಯಿ ಈರಮ್ಮಕ್ಕನ ಅದಮ್ಯ ಪ್ರೀತಿಯನ್ನೂ ಧಿಕ್ಕರಿಸಿ ಹೋಗಿಬಿಟ್ಟಳು. ಪ್ರತಿಕ್ಷಣವೂ ಕಾಡುವ ಆ ಜೀವದ ಕೋತಿ, ನಾಯಿ ಮರಿ, ಪುಟ್ಟ ಪಾರಿವಾಳದಂತಾ ನನ್ನ ಶಿವುಗೆ ಮೂರನೇ ಕಥಾ ಸಂಕಲನ ಅಪರ್ಿಸುತ್ತಿದ್ದೇನೆ. ಮನಸ್ಸಿಗೊಂದಿಷ್ಟು ನಿರಾಳತೆ ಮೂಡೀತು ಎಂಬ ಬಯಕೆ ನನ್ನದು. ಕೃತಿಯ ರೂಪದಲ್ಲಿ ಆ ಕೋಡಿ ಎಂದಿಗೂ ನನ್ನ ಜೊತೆಗಿರಲಿ. ನನ್ನ ಬದುಕು ಹಲವು ವೈರುಧ್ಯಗಳಿಗೆ ಸಾಕ್ಷಿಯಾದರೂ ತಾಯಿಯಂತೆಯೇ ಎಲ್ಲವನ್ನೂ ಹೊಟ್ಟೆಯಲ್ಲಿ ಹಾಕಿಕೊಂಡು ತನ್ನ ಮೂರನೇ ಮಗುವೆಂಬಂತೆ ಸಲುಹುವ ಸಂಗಾತಿ ಉಮಾ, ಬಲು ಕಿರಿಕಿರಿಯ ಸಿರಿ, ಬುಸುಗುಡುವ ಭೂಮಿ ಎಂಬ ಜೀವದ ತುಣುಕುಗಳ ಜೊತೆಗೆ ಸಹೋದರಿ ಯಶೋಧಾ ಸೊರಟೂರು ಪ್ರೀತಿಯಿಲ್ಲದಿದ್ದರೆ ಈ ಕಥಾ ಸಂಕಲನ ಎಲ್ಲಿ ಬರುತ್ತಿತ್ತು? ಏಳೆಂಟು ತಿಂಗಳು ಊರಿಗೆ ಹೋಗದೆ ಇದ್ದು ನನ್ನನ್ನು ಬಹುವಾಗಿ ಹಿಂಸಿಸಿಕೊಂಡಿದ್ದೇನೆ. ಮೊನ್ನೆಯಷ್ಟೆ ಹೋಗಿ ಅಪ್ಪ, ಅವ್ವ, ಅಕ್ಕ, ತಮ್ಮಂದಿರು, ಸುವ್ವಿ, ಚೆನ್ನ, ಆಕಳುಗಳನ್ನೂ ಕಣ್ತುಂಬಿಕೊಂಡು ಬಂದೆ. ಗುಡದೂರು, ಜನ, ದಾರಿ, ಮನೆಗಳು, ಗಿಡ, ಗಂಟೆ, ಹೊಲ ಪ್ರತಿಸಂಗತಿಯೂ ನನಗೆ ಅಚ್ಚುಮೆಚ್ಚು. ಕಳೆದ ಹದಿನೈದು ವರ್ಷಗಳಿಂದಲೂ ನನ್ನಲ್ಲಿರುವ ಕಥೆಗಾರನನ್ನು ಸದಾ ಜಾಗೃತಿ ಸ್ಥಿತಿಯಲ್ಲಿರಿಸಿದ ಹಿರಿಯರಾದ ಅಮರೇಶ ಕುಂಬಾರ, ಚಿತ್ರಶೇಖರ ಕಂಠಿ, ಆಶಾ ಕಂಠಿ, ಕುಂ.ವೀರಭದ್ರಪ್ಪ, ಮಲ್ಲಿಕಾಜರ್ುನ ಹಿರೇಮಠ, ಸಿ.ಚನ್ನಬಸವಣ್ಣ, ರಾಘವೇಂದ್ರ ಪಾಟೀಲ್, ಎಸ್.ದಿವಾಕರ, ಅಬ್ದುಲ್ ರಶೀದ್, ವಿವೇಕ ಶಾನಭಾಗ, ರಹಮತ್ ತರಿಕೆರೆ, ಅಮರೇಶ ನುಗಡೋಣಿ, ಮೊಗಳ್ಳಿ ಗಣೇಶ, ಡಾ.ಬಿ.ಎಂ.ಪುಟ್ಟಯ್ಯ, ಜಿ.ಎನ್.ಮೋಹನ್, ಗೌರಿ ಲಂಕೇಶ, ರವೀಂದ್ರ ರೇಷ್ಮೆ, ಆನಂದ ಪಾಟೀಲ್, ಎಂ.ಎಸ್.ಹಿರೇಮಠ, ಜಾತಿ ವಿನಾಶ ವೇದಿಕೆಯ ಲಕ್ಷ್ಮಣ, ಸರ್ ಎಂಬ ನೈಜ ಹೋರಾಟಗಾರ, ಬಸವರಾಜ ಸಾದರ, ವೆಂಕಟಲಕ್ಷ್ಮೀ, ಸುನಂದಾ ಪ್ರಕಾಶ ಕಡಮೆ, ಬಸು ಬೇವಿನಗಿಡದ, ಲಕ್ಷ್ಮಣ ಕೊಡಸೆ, ಗುಡಿಹಳ್ಳಿ ನಾಗರಾಜ, ಜೋಗಿ, ಎಚ್.ಪಂಪಯ್ಯಶೆಟ್ಟಿ, ಜಂಬಣ್ಣ ಅಮರಚಿಂತ, ಮಹಾಂತೇಶ ಮಸ್ಕಿ, ಬಸವರಾಜ ಸೂಳಿಬಾವಿ, ಕನ್ನಾಡಿಗಾ ನಾರಾಯಣ, ರಾಜಶೇಖರ ಹತಗುಂದಿ ಇನ್ನೂ ಹಲವರು. ಸಹಲೇಖಕರು ಹಾಗು ನನ್ನ ಬಗ್ಗೆ ಅಪಾರ ಪ್ರೀತಿಯಿಟ್ಟಿರುವ ಚಂದ್ರು ತುರುವೀಹಾಳ, ಚಿದಾನಂದ ಸಾಲಿ, ವಿ.ಎಂ.ಮಂಜುನಾಥ, ಸಿ.ಮಂಜುನಾಥ, ಆನಂದ ಋಗ್ವೇದಿ, ಅರುಣ ಜೋಳದ ಕೂಡ್ಲಿಗಿ, ಪೀರಭಾಷಾ, ಆರೀಫ್ ರಾಜಾ, ರಘುನಾಥ ಚ.ಹ., ಸಂದೀಪ ನಾಯಕ, ಡಿ.ಎಸ್.ರಾಮಸ್ವಾಮಿ, ದತ್ತು ಇಕ್ಕಳಕಿ, ದೇವರಾಜ ಬಪ್ಪೂರು, ದೇವು ಪತ್ತಾರ, ದಸ್ತಗೀರಸಾಬ ದಿನ್ನಿ, ಗೋವಿಂದರಾಜ ಬಾರಿಕೇರ, ಹಾಲ್ಕುರಿಕೆ ಶಂಕರ್, ಬಸವರಾಜ ಹವಾಲ್ದಾರ, ಜಹಾಂಗೀರ, ಮಲ್ಲಿಕಾಜರ್ುನಗೌಡ ತೂಲಹಳ್ಳಿ, ಕೆ.ಕರಿಸ್ವಾಮಿ, ಖಾಜಾವಲಿ ಈಚನಾಳ, ಲಕ್ಷ್ಮಣ ಬಾದಾಮಿ, ಕಂಡಕ್ಟರ್ ಸೋಮು, ವಿ.ಆರ್.ಕಾಪರ್ೆಂಟರ್, ಮಹಾಂತೇಶ ನವಲಕಲ್, ಮಂಜುನಾಥ ಲತಾ, ಮುದ್ದು ತೀರ್ಥಹಳ್ಳಿ, ನಾಗಣ್ಣ ಕಿಲಾರಿ, ನರಸಪ್ಪ ಕಂಡಕ್ಟರ್, ಹಾಜಿಸಾಬ್, ನರಸಿಂಹಪ್ಪ, ಕೆ.ಆರ್.ರಂಗನಾಥ, ರಂಗನಾಥ ಟಿ.ವಿ.ನೈನ್, ರವಿ ಹಿರೇಮಠ ಶಹಾಪುರ, ಸಜರ್ಾಶಂಕರ ಅರಳಿಮಠ, ಸತೀಶ ಚಪ್ಪರಿಕೆ, ಶಶಿ ಸಂಪಳ್ಳಿ, ವಿದ್ಯಾರಶ್ಮಿ, ಶ್ರೀಕಲಾ, ವಸುಧೇಂದ್ರ, ಟಿ.ಎಸ್.ಗೊರವರ, ವಿಜಯ ಪಾಟೀಲ್, ಕಂಡಕ್ಟರ್ ಸೋಮು ಹೀಗೆ ರಾಯಚೂರು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಗೆಳೆಯರು ನನಗೆ ಸದಾ ಕಥೆ ಬರೆಯಲು ಪ್ರೇರಣೆ ನೀಡುತ್ತಾರ. ಎಲ್ಲರದೂ ಒಂದೇ ಆಸೆ, ಕಾದಂಬರಿಯೊಂದನ್ನು ಬರೆ. ಆದರೆ ಅದಕ್ಕಾಗಿ ಬೇಕಾದ ಸಮಯ, ತನ್ಮಯತೆ ಸದ್ಯ ಸಿಕ್ಕಿಲ್ಲ ಅಷ್ಟೆ. ಮೂರನೇ ಕಥಾ ಸಂಕಲನ ಮಾಮೂಲಿ ಗಾಂಧಿ ಹೊರತರುತ್ತಿರುವ ಹಿರಿಯರಾದ ಡಾ.ಸ್ವಾಮಿರಾವ್ ಕುಲಕಣರ್ಿ ಮತ್ತು ಅಪ್ಪಾರಾವ್ ಅಕ್ಕೋಣೆ ಅವರಿಗೆ ಬಹು ಕೃತಜ್ಞನಾಗಿದ್ದೇನೆ. ಅಂಗೈಯಲ್ಲಿ ಪುಟ್ಟ ಜೀವದ ಚೂರೆಂಬಂತೆ ಹಿಡಿದ ನಿಮ್ಮನ್ನು ನೆನೆಯುತ್ತಲೇ ಇರುತ್ತೇನೆ.
ತಮ್ಮವನೇ ಕಲಿಗಣನಾಥ ಗುಡದೂರು
ಕಲಿಗಣನಾಥ ಗುಡದೂರುಇಂಗ್ಲಿಷ್ ಉಪನ್ಯಾಸಕಸಂಕೇತ ಕಾಲೇಜ್ಸಿಂಧನೂರು -584128ಜಿಲ್ಲೆ: ರಾಯಚೂರುಮೊ: 9916051329