ಮಂಗಳವಾರ, ಮಾರ್ಚ್ 17, 2009

ಅಕ್ಕನೆಂಬ ತಾಯಿ


ಅಮ್ಮ ಮತ್ತು ಅಕ್ಕನಿಲ್ಲದ ಮನೆ ಒಂದು ತೆರನಾದ ಖಾಲಿ ಖಾಲಿ! ಅಕ್ಕ ಮತ್ತು ಅಮ್ಮನ ನಡುವೆ ಬಹಳ ವ್ಯತ್ಯಾಸ ಗುರುತಿಸಲಾಗದೇನೊ? ಅಕ್ಕನೆಂದರೆ ಥೇಟ್ ತಾಯಿಯೇ. ಅಕ್ಕರೆಯಲಿ ಅವ್ವನಿಗೆ ಸವಾಲು ಒಡ್ಡುವ ರೀತಿ ಅಕ್ಕನದು. ನನ್ನಕ್ಕ ಶಿವಮ್ಮನೆಂದರೆ ತಾಯಿ, ತಂದೆ, ಗುರು, ಹಿತೈಷಿ. ಆಕೆ ಓದಿದ್ದು ಕೇವಲ ಮೂರನೇ ಕ್ಲಾಸ್. ಆಕೆಗಿಂತ ನಾನು ಒಂದೂವರೆ ವರ್ಷ ಚಿಕ್ಕವ. ಎರಡೂ ಕ್ಲಾಸ್ಗಳೂ ಕೂಡಿಯೇ ಇದ್ದವು ಆಗ. ನನಗೆ ಊಟಮಾಡಿಸುವುದರಿಂದ ಹಿಡಿದು ನನ್ನೆಲ್ಲಾ ಜವಾಬ್ದಾರಿ ಆಕೆಯ ಪುಟ್ಟ ಹೆಗಲುಗಳ ಮೇಲೆ. ಆಕೆ ಹತ್ತೆನ್ನರಡು ವರ್ಷಗಳಾಗುತ್ತಲೆ ಅವ್ವನ ಜೊತೆಗೆ ಕೂಲಿಗೆ ಜೊತೆಯಾದಳು. ಅವ್ವ ಮತ್ತು ಅಕ್ಕ ಕೂಲಿಯಿಂದ ತಂದ ದುಡ್ಡೇ ನನ್ನ ಓದು, ಬಟ್ಟೆಗಂತ ಖಚರ್ಾಗಿದ್ದು. ನನ್ನ ಎಂ.ಎ. ಸಟರ್ಿಫಿಕೇಟುಗಳ ಮೇಲೆ ಅಕ್ಕನದೇ ಬೆವರಿನ ಹನಿಗಳ ಸಹಿಗಳಿವೆ. ಅಕ್ಕ ನನಗೆ ಹಲವು ಬಾರಿ ಹಂಗಿಸಿದ್ದುಂಟು! ಅಂದರೆ ಆಕೆ ಕೆಟ್ಟ ಮನಸ್ಸಿನಿಂದ ಹಾಗೆ ಮಾಡುತ್ತಿರಲಿಲ್ಲ. ತಾನು ದುಡಿದ ದುಡ್ಡು ಎಲ್ಲಿ ವೇಸ್ಟ್ ಆಗಿ ಬಿಡುತ್ತೊ ಅನ್ನೊ ಆತಂಕ. ಅಪ್ಪ, ಅವ್ವನೊಂದಿಗೆ ನನಗೆ ಕೊಡುತ್ತಿದ್ದ ದುಡ್ಡಿನ ಬಗ್ಗೆ ಆಗಾಗ ಜಗಳ ಕಾಯುತ್ತಿದ್ದಳು. ಹಾಗೆ ಜಗಳ ಕಾಯುತ್ತಿದ್ದರಿಂದಲೇ ನನಗೆ ದುಡ್ಡಿನ ಬೆಲೆ ಅರಿವಾಗಿದ್ದು. ನಾನೂ ಹೈಸ್ಕೂಲ್ ಮತ್ತು ಕಾಲೇಜು ಓದುತ್ತಿದ್ದಾಗ ಅಕ್ಕ ಮತ್ತು ಅವ್ವನೊಂದಿಗೆ ಕೂಲಿಗೆ ಹೋಗುತ್ತಿದ್ದೆ. ಪದವಿ ಪಡೆದರೂ ದುಡಿಯುವ ಸ್ಥಳದಲ್ಲಿ ಸಮಾನತೆ ಎಂಬುದಿಲ್ಲ. ಆದರೆ ಆಗ ನಾನು ಅಕ್ಕ, ಅವ್ವ ಮತ್ತು ಊರಿನ ಕೆಲವು ಬಡವರ ಜೊತೆಗೆ ಕೂಲಿಗೆ ಹೋಗುತ್ತಿದ್ದಾಗ ಸಿಕ್ಕ ಖುಷಿ, ಅವರೆಲ್ಲರ ಜೊತೆಗೆ ಗಿಡದ ನೆರಳಲ್ಲಿ ಕುಳಿತು ಉಂಡ ಸಂಭ್ರಮ, ಗದ್ದೆಯ ವರತಿಗಳಲ್ಲೆ ಬಗ್ಗಿ ಬೊಗಸೆಯಲ್ಲಿ ಸಾಮೂಹಿಕವಾಗಿ ಸ್ವಲ್ಪವೂ ಹೇಸಿಕೆ, ಮುಜುಗರವಿಲ್ಲದೆ ನೀರು ಕುಡಿದ ಪರಿ ಈಗ ಎಲ್ಲೂ ಸಿಗದು. ಅಪ್ಪ, ಅವ್ವನಿಗಿಂತ ತುಸು ಹೆಚ್ಚೇ ನೆನಪಾಗುವ, ಕಾಡುವ ವ್ಯಕ್ತಿಯೆಂದರೆ ಅಕ್ಕನೇ. ಈಗಲೂ ತಮ್ಮ ಊರಿಗೆ ಬರುತ್ತಿಲ್ಲ ಎಂದು ಅಕ್ಕ ಸದಾ ಹಲಬುತ್ತಿರುತ್ತಾಳೆ. ನಾ ಹೋದಾಗ ಊಟ ಮಾಡದೇ ಬಂದರೆ ಆಕೆ ಬ್ರಹ್ಮಾಂಡದಷ್ಟು ಸಿಟ್ಟು. ನನಗಿಂತ ಕೇವಲ ಒಂದೂವರೆ ವರ್ಷ ದೊಡ್ಡವಳಾದ ಅಕ್ಕ ದುಡಿದು ದುಡಿದು ಅವ್ವನಿಗಿಂತಲೂ ವಯಸ್ಸಾದಂತೆ ಕಾಣುತ್ತಿದ್ದಾಳೆ. ಅಪ್ಪನ ಪಾಲಿನಲಿ ನನಗೇನೂ ಬೇಡವೆಂದೇ ನಾನು ಹಲವು ವರ್ಷಗಳ ಹಿಂದೆಯೇ ಹೇಳಿದ್ದುಂಟು. ನನ್ನ ಪಾಲೇನಾದರೂ ಕೊಡಬೇಕೆನಿಸಿದರೆ ನನ್ನ ಅಕ್ಕನಿಗೇ ಕೊಡಿ ಎಂದೇ ಹೇಳಿದ್ದೇನೆ. ಅಕ್ಕ ದುಡಿದು ಓದಿಸದದ್ದರೆ... ಬೇಡ ಬಿಡಿ. ಏನು ಆಗುತ್ತಿದ್ದೆನೊ? ಯೋಚಿಸಿದಷ್ಟು ಮನಸ್ಸು ಮುದುಡುತ್ತದೆ. ನನ್ನನ್ನು ಸ್ನಾತಕೋತ್ತರ ಪದವೀಧರ ಮಾಡಿದ ಅಕ್ಕ ನನ್ನ ಪಾಲಿನ ವಿಶ್ವವಿದ್ಯಾಲಯ. ಪೈಸೆಯ ಲೆಕ್ಕ ಆಕೆಯಿಂದಲೇ ಕಲಿಯಬೇಕು. ಅಕ್ಕನ ನೋಡಲು ಮುಂದಿನ ವಾರವೇ ಊರಿಗೆ ಹೋಗುತ್ತೇನೆ. ಅಕ್ಕನಿಗೆ ಸ್ವೀಟ್ ಎಂದರೆ ಪಂಚಪ್ರಾಣ. ಏನಾದರೂ ಒಯ್ಯುತ್ತೇನೆ. ಇನ್ನೂ ಒಂದು ಮಾತು. 'ಪುಟ್ಟ ಪಾದಗಳು' ಲೇಖನದಲ್ಲಿ ಕೇವಲ ಒಂದಿಬ್ಬರ ಪಾದಗಳಿಗೆ ಈಗಲೂ ನಮಸ್ಕರಿಸುತ್ತೇನೆ ಎಂದು ಬರೆದಿದ್ದೆನಲ್ಲ ಅವುಗಳಲ್ಲಿ ಅಕ್ಕನ ಪಾದಗಳು ಸೇರಿವೆ. ಹೋದಾಗ ಮತ್ತೆ ಅಕ್ಕನ ಪಾದಗಳಿಗೆ ನನ್ನ ಹಣೆ, ಕಣ್ಣೊತ್ತಿ ನಮಸ್ಕರಿಸಿ ಬರುವೆ. ನಿಜಕ್ಕೂ ಅಕ್ಕ ಎಂಬ ಅಕ್ಕರೆಯ ಜೀವಿ ಬಹುತೇಕ ಜೀವನಾಡಿ, ಒಡನಾಡಿ, ಥೇಟ್ ಭೂಮಿಯಂಥವಳು... ಆಕೆಗೆ ಹೋಲಿಕೆಯೆಂದರೆ ತಾಯಿಯೇ ಬಿಡಿ....
-ಕಲಿಗಣನಾಥ ಗುಡದೂರು