ಸೋಮವಾರ, ಮಾರ್ಚ್ 16, 2009

ಪವಿತ್ರ ಪುಟ್ಟ ಪಾದಗಳ ಕಣ್ಣಿಗೊತ್ತಿಕೊಂಡು...


ಜಗತ್ತಿನ ಅತ್ಯಂತ ಪವಿತ್ರವಾದ ವಸ್ತು ಯಾವುದು? ಹೀಗೆ ಪ್ರಶ್ನಿಸಿಕೊಂಡಾಗ ಅನ್ನಿಸಿದ್ದು, ಹಸುಕಂದಮ್ಮಗಳ ಬೆಣ್ಣೆ ಮೆದುವಿನ ಪುಟ್ಟ ಪಾದಗಳೇ ಅತ್ಯಂತ ಪವಿತ್ರ. ಇಬ್ಬನಿ ತಣ್ಣನೆಯ ಕಂದಮ್ಮಗಳ ಪುಟ್ಟ ಪಾದಗಳೆಂದರೆ ನನಗೆ ಎಲ್ಲಿಲ್ಲದ ಪ್ರೀತಿ. ಅವುಗಳನ್ನು ನೋಡುತ್ತಾ ಹಲವು ಬಾರಿ ನನ್ನನ್ನು ನಾನು ಮರೆಯುವುದುಂಟು. ಅದೆಷ್ಟು ಸುಂದರವೊ ಈ ಪುಟ್ಟ ಪಾದಗಳು. ಕಣ್ಣ ಕಿರಣ, ಇನಿದನಿ, ತಂಗಾಳಿ, ತಿಳಿಗೊಳ ಎಲ್ಲಕ್ಕೂ ಮಿಗಿಲಾದ ನವಿರು ಈ ಪುಟ್ಟ ಪಾದಗಳಲಿ. ಇಂತಹ ಪುಟ್ಟ ಪಾದಗಳಿಗೆ ಹಣೆ ಹಚ್ಚುವುದೆಂದರೆ ಎಲ್ಲಿಲ್ಲದ ಖುಷಿ, ಸಂಭ್ರಮ, ಹಬ್ಬ, ಜಾತ್ರೆ ಮನದರಮನೆಯಲ್ಲಿ. ಕಣ್ಣಿಗೊತ್ತಿಕೊಂಡರೆ ಬೇಕಿಲ್ಲ ಹಾಡು, ಬರೆಹ, ಓದು, ಊಟ, ನಿದ್ದೆ ಇನ್ನೂ ಏನೇನೊ ಆ ಕ್ಷಣದಲ್ಲಿ. ಇಂಥಹ ಪುಟ್ಟ ಪಾದಗಳಿಗೆ ಹಣೆ ಹಚ್ಚಿದಾಗ, ಕಣ್ಣೊತ್ತಿದಾಗ ಭಕ್ತಿಯೊ, ಪ್ರೀತಿಯೊ ಅದೇನೊ ಒಂಥರ ಮೈಯಲ್ಲಿ ಪ್ರವಾಹ ಶುರು. ನನಗೆ ತಂದೆ-ತಾಯಿ ಹಾಗೂ ತೀರಾ ಒಂದಿಬ್ಬರ ಪಾದಗಳಿಗೆ ನಮಿಸುವುದು ಬಿಟ್ಟರೆ, ಸ್ವಾಮಿಗಳು, ಜಗದ್ಗುರು, ಬಾಬಾ, ತಾವೇ ದೊಡ್ಡೋರು ಎಂದು ಕರೆದುಕೊಳ್ಳೋರು, ದೇವರು, ಫೋಟೊಗಳು, ಕಲ್ಲು, ಕಟ್ಟಿಗೆ ಮೂತರ್ಿಗಳ ಪಾದಗಳನ್ನು ಕೈಯಿಂದ ಮುಟ್ಟಲೂ ಬಹು ಬೇಜಾರು, ಥೇಟ್ 'ಅದೇನೋ' ಮುಟ್ಟಿದಂತೆ ಕೈ ತನ್ನಷ್ಟಕ್ಕೆ ತಾನೆ ಹಿಂದಕ್ಕೆ ಸರಿಯುತ್ತದೆ. ಎಂತೆಂಥ ಅನರ್ಹ ವ್ಯಕ್ತಿಗಳ ಪಾದಗಳನ್ನು ಮುಟ್ಟಿ ಸಂಭ್ರಮಿಸುವ ಜನರನ್ನು ನೋಡಿದಾಗ ಅಯ್ಯೊ ಎನಿಸುತ್ತದೆ. ಹೋಗಿ ನಿಮ್ಮ ಮನೆಯ ಪುಟ್ಟ ಕಂದಮ್ಮಗಳ ಪಾದಗಳನ್ನಾದರೂ ಮುಟ್ಟಿ ಆನಂದಿಸಿ, ಕಣ್ಣಿಗೊತ್ತಿಕೊಳ್ಳಿ ನೀವು ಹಾಗೆ ಯಾರ್ಯಾರದೊ ಕಾಲುಗಳನ್ನು ಯಾವುದ್ಯಾವುದೊ ಕಾರಣಗಳಿಂದ ಹಿಡಿದ ಪಾಪಕ್ಕೆ ಪರಿಹಾರ ದೊರಕೀತು. ಹಾಗೆ ಪಾದಗಳನ್ನು ಮುಟ್ಟಿಸಿಕೊಳ್ಳುವವರೂ ಮಕ್ಕಳಂತೆಯೇ ಇರಬೇಕು. ಯಾವುದೇ ಬಣ್ಣ, ಜಾತಿ, ಧರ್ಮ, ಭಾಷೆ, ಪ್ರಾಂತ, ದೇಶ, ಓದು, ಪ್ರಶಸ್ತಿ, ಪುರಸ್ಕಾರಗಳ ಹಿರಿಮೆ, ಗರಿಮೆ ಹೆಗ್ಗಳಿಕೆಗಳ ಹಂಗಿನಿಂದ ಮಲಿನವಾಗಿರಬಾರದು. ಹೀಗಿರುವ ದೊಡ್ಡವರು ಸುತ್ತಮುತ್ತಲಿನ ಪರಿಸರದಲ್ಲಿ ಸಿಗುವುದೇ ಇಲ್ಲ ಬಿಡಿ. ಹುಡುಕುವುದೂ ವ್ಯರ್ಥ ಪ್ರಯತ್ನ. ಗೌರವಿಸುವುದು ಸಂಪ್ರದಾಯ. ಆದರೆ ಡೊಗ್ಗಿ ಸಲಾಮು ಹಾಕುವುದು ಕೇವಲ ಗುಲಾಮಿತನ. ಸೌಜನ್ಯ ಮಾತು, ನಡವಳಿಕೆ ತಪ್ಪಲ್ಲ; ಅದೇ ಮುಖವಾಡ ಧರಿಸುವುದು ತಪ್ಪು. ನಮಸ್ಕರಿಸಿಕೊಳ್ಳುವವನಿಗೆ ಮೊದಲ ಅರ್ಹತೆ, ನಮಸ್ಕರಿಸಿದವನಿಗೂ ಅಂಥದೇ ಗೌರವ ತೋರಬೇಕೆನ್ನುವುದು. ವ್ಯಕ್ತಿಗಳಲ್ಲೆ ದೊಡ್ಡೋನು, ಸಣ್ಣೋನು ಎಂಬುದಿಲ್ಲ. ಅದೇ ತಾನೆ ಹುಟ್ಟಿದ ಶಿಶು ಮತ್ತು ಇನ್ನೇನು ಕೊನೆಯ ಬಿಕ್ಕು ಕಾಣಿಸಿಕೊಂಡ ವ್ಯಕ್ತಿಯನ್ನೂ ವೈಜ್ಞಾನಿಕವಾಗಿ 'ಹೋಮೋ ಸೆಪಿಯನ್ಸ್' ಎಂಬ ಹೆಸರಿನಲ್ಲೆ ಕರೆಯುವುದು. ಹೀಗಿದ್ದಾಗ ಮತ್ತೆಲ್ಲಿಂದ ಬಂತು ಈ ಏಣಿಶ್ರೇಣಿ? ವ್ಯಕ್ತಿ ಸಮಾಜದಲ್ಲಿ ಉನ್ನತ ಸ್ಥಾನ ಮಾನ ಹೊಂದಿರಬಹುದು ಅವನಿಗೆ ಪಾದಮುಟ್ಟಿಯೇ ನಮಸ್ಕರಿಸಿಯೇ ಗೌರವ ತೋರಿಸಬೇಕೆಂದೇನಿಲ್ಲ. ಸೌಜನ್ಯದಿಂದ ನಮಸ್ಕಾರ ಎಂದರೂ ಸಾಕು. ಪಾದಮುಟ್ಟಿ ನಮಸ್ಕರಿಸಿಕೊಳ್ಳುವ ವ್ಯಕ್ತಿಗೆ ಮತ್ತೊಂದು ಅರ್ಹತೆ, ಹಾಗೆ ನಮಸ್ಕರಿಸಿದ ವ್ಯಕ್ತಿಯ ಪಾದಗಳನ್ನೂ ಅಷ್ಟೆ ಗೌರವ, ಭಯ, ಭಕ್ತಿಯಿಂದಲೇ ನಮಸ್ಕರಿಸುವ ತೀರಾ ಅನಿವಾರ್ಯವಾದ ಸೌಜನ್ಯವಿರಬೇಕು. ಹಾಗೆ ಮಾಡಿದಾಗ ಮಾತ್ರ ನಮಸ್ಕರಿಸಿಕೊಂಡ ವ್ಯಕ್ತಿಗೂ ಒಂಚೂರು ಬೆಲೆ ಬರುತ್ತೆ. ನಮಸ್ಕರಿಸಿದವನ ಶ್ರಮವೂ ತಿಳಿಯುತ್ತೆ. ಇನ್ನೂ ಒಂದು ಮಾತು; ಇದು ಪುಟ್ಟ ಕಂದಮ್ಮಗಳಿಗೆ ಅನ್ವಯಿಸದು. ಹಾಗೆ ಪಾದಗಳನ್ನು ಕನಿಷ್ಠವೆಂದೇ ಭಾವಿಸುವ ಒಂದು ಮನೋಧರ್ಮವಿದೆ. ಪಾದಗಳೇ ಕನಿಷ್ಠವೆಂದೇ ಭಾವಿಸುವ ಕನಿಷ್ಠ ವ್ಯಕ್ತಿತ್ವದ ಹಾಗೂ ನಮಸ್ಕರಿಸಿಕೊಂಡೇ ದೊಡ್ಡೋರು ಎಂದು ಭ್ರಮಿಸುವ ಜನರ ಪಾದಗಳನ್ನು ಹಿಡಿದರೆ ಯಾವ ಮತ್ತು ಯಾರ ಪಾಪ ಪರಿಹಾರವಾಗುತ್ತೊ? ಬಹುತೇಕರು ನನ್ನಂತಾ ಸಾಮಾನ್ಯರು ತಿಳಿದಂತೆ ದೇಹದ ಯಾವ ಅಂಗವೂ ಶ್ರೇಷ್ಠವೂ ಅಲ್ಲ; ಕನಿಷ್ಠವೂ ಅಲ್ಲ. ಕಿರುಬೆರಳಿಗೆ ಸಿಗುವ ಮಾನ ಎಲ್ಲದಕ್ಕೂ ಸಹಜವಾಗಿಯೇ ಇದೆ. ಧಾಮರ್ಿಕವಾಗಿ ಪ್ರಭಾವ ಮೆರೆಯುವ ಜನರನ್ನು (ಬೇಕಾದರೆ ಸ್ವಾಮಿಗಳು, ಜಗದ್ಗುರುಗಳು, ಧರ್ಮಗುರುಗಳು ಎಂದೂ ತಿಳಿಯಲೂ ಅಡ್ಡಿಯಿಲ್ಲ) ತಲೆ ಮೇಲೆ ಹೊತ್ತು ತಿರುಗುವ ಮೂರ್ಖತನ, ಮೂಢತೆಗೆ ಧರ್ಮ, ನೀತಿ, ನಿಯಮ, ಪಾಪ, ಪುಣ್ಯದ ಪೌಡರು ಉಗ್ಗುವ ಮಂದಿಯಿದ್ದಾರೆ. ಜಾತಿ, ಧರ್ಮಗಳ ಸೃಷ್ಟಿ ಜೀವವಿಕಾಸ ಸಿದ್ಧಾಂತದಂತೆ, ಮನುಷ್ಯನ ರೂಪು ತಳೆಯುವಿಕೆಯೊಂದಿಗೇ ಆದದ್ದಲ್ಲ. ಅವೆಲ್ಲಾ ಅಂಜುಬುರುಕ ನಮ್ಮ ಹಳೆಯ ತಲೆಮಾರುಗಳ ಮುತ್ತಜ್ಜರ ಸೃಷ್ಟಿ. ಅಪ್ಪ ನೆಟ್ಟ ಆಲದ ಮರಕ್ಕೇ ಜೋತು ಬೀಳುವುದು ತಪ್ಪು ಎಂದು ತಿಳಿಹೇಳುವ ಬುದ್ಧಿವಂತರಿಗೆ ಸಾವಿರಾರು ವರ್ಷಗಳಷ್ಟು ಹಳೆಯದಾದ, ತಳಬುಡವಿಲ್ಲದ, ಬರೀ ಮೇಲು, ಕೀಳು, ದ್ವೇಷ, ಅಸೂಯೆ ಹುಟ್ಟಿಸುವ ಜಾತಿ, ಧರ್ಮ, ದೇವರು, ಪೂಜೆ, ಪುನಸ್ಕಾರ, ಪ್ರಾರ್ಥನೆ, ಹರಕೆ ಇವು ಯಾಕೆ ಬೇಕೆನಿಸುತ್ತಾವೊ? ಬಹು ಸೋಜಿಗದ ಸಂಗತಿ. ಅದಕ್ಕೆ ನನಗೆ ಮತ್ತೆ ಕಾಡುವುದು ಹಸುಕಂದಮ್ಮಗಳ ಪುಟ್ಟ ಪಾದಗಳು. ನಮ್ಮ ಅಹಂ, ದೊಡ್ಡಸ್ಥಿಕೆಯ ಮುರಿಯಲು ಪುಟ್ಟ ಪಾದಗಳಿಗೆ ಹಣೆ ಹಚ್ಚಬೇಕು. ಅವುಗಳನ್ನು ಹಾಗೆ ಸುಮ್ಮನೆ ಕಣ್ಣಿಗೊತ್ತಿಕೊಳ್ಳಬೇಕು. ಯಾವ ದೇವರು, ಧರ್ಮ, ಜಾತಿ, ಧರ್ಮಗುರು ಬೇಕಿಲ್ಲ ನಮ್ಮ ಮನವ ಸಂತೈಸಲು ತನುವ ತಣಿಸಲು; ಸಾಕು ನಸುನಗುವ, ಅಳುವ, ಪಿಳಿಪಿಳಿ ಕಣ್ಣು ಬಿಡುವ, ಕೈ ಕಾಲು ಅತ್ತಿತ್ತ ಆಡಿಸಿ ನಲಿಯುವ ಹಸುಕಂದಮ್ಮಗಳ ಪುಟ್ಟ ಪಾದಗಳು. ಇರುವ ಒಂದೇ ಜಲುಮದಿ ನಾವು ನಾವಾಗಿ ಬದುಕಿ, ನಮ್ಮತನ ಮೆರೆಯಲು, ನಮಗೂ ಮನುಷ್ಯರೆಂಬ ಒಂದಷ್ಟು ವೈಯಕ್ತಿಕ ಗೌರವವಿದೆಯೆಂಬ ಕಾರಣಕ್ಕೆ ಯಾರಿಗೋ ಬಾಗಿ ಬೆನ್ನು ಉಳುಕಿಸಿಕೊಳ್ಳುವುದಕ್ಕಿಂತ, ಅವನ ಉಪೇಕ್ಷೆಗೆ ಒಳಗಾಗುವುದಕ್ಕಿಂತ ಪುಟ್ಟ ಪಾದಗಳ ಮೇಲೆ ಹಣೆ ಹಚ್ಚಿ ನೋಡಿ, ಒಂದೆರಡು ಕ್ಷಣಬಿಟ್ಟು ಕಣ್ಣಿಗೊತ್ತಿಕೊಂಡು ನೋಡಿ... ಎಲ್ಲವನ್ನೂ ಅಕ್ಷರಗಳಲ್ಲೆ ಹೇಳುವುದೂ ಅಸಾಧ್ಯ!

-ಕಲಿಗಣನಾಥ ಗುಡದೂರು